ಸರ್ವ ಜನರ ಬೆಂಬಲ ಕಾಂಗ್ರೆಸ್ ಗೆಲ್ಲಲು ಕಾರಣ: ಸದಾಶಿವಯ್ಯ
ಕ.ಪ್ರ. ವಾರ್ತೆ ತಿಪಟೂರು ಮೇ 10
ಎಲ್ಲ ಜಾತಿ, ಧರ್ಮ, ವರ್ಗದ ಜನರ ಸಹಕಾರದ ಜತೆಗೆ ಈ ಹಿಂದೆ ಶಾಸಕರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಕಾಂಗ್ರೆಸ್ ಪರ ಅಲೆಯಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಗೆಲವಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನ ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವುದು, ರೈತರ ಜೀವನಾಡಿ ತೆಂಗಿನ ಬೆಳೆಗೆ ಪ್ರೋತ್ಸಾಹ, ನೀರಾವರಿ ಸೌಲಭ್ಯ, ನಿವೇಶನ ರಹಿತ ಬಡವರಿಗೆ ನಿವೇಶನ, ಅರ್ಹ ಅಂಗವಿಕಲರು, ವೃದ್ಧರು, ವಿಧವೆಯರಿಗೆ ಮಾಸಾಶನ ಸೇರಿದಂತೆ ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೂತನ ಶಾಸಕರಾದ ಕೆ.ಷಡಕ್ಷರಿಯವರು ಬದ್ಧರಾಗಿದ್ದಾರೆಂದರು.
ಕೆ.ಷಡಕ್ಷರಿಯವರು ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಈಗಾಗಲೆ ರಾಜ್ಯಮಟ್ಟದ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸರ್ಕಾರ ರಚನೆಯ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಗೆಲುವಿಗೆ ಮತ ನೀಡಿದ ತಾಲೂಕಿನ ಮತದಾರರಿಗೂ ಹಾಗೂ ಹಗಲಿರುಳೆನ್ನದೇ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸಿದರು.