ಸಿದ್ದರಾಮಯ್ಯ ಆಯ್ಕೆಗೆ ಪಟಾಕಿ ಸಿಡಿಸಿ ಸಂಭ್ರಮ
ಪಾವಗಡ: ಹಿಂದುಳಿದ ವರ್ಗಗಳ ನಾಯಕ ಸಿದ್ಧರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎ.ಕೆ.ಆಂಟೋನಿ ಅವರು ಘೋಷಿಸುತ್ತಿದ್ದಂತೆ ಶುಕ್ರವಾರ ಪಾವಗಡ ಪಟ್ಟಣದಲ್ಲಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಸಿದ್ಧರಾಮಯ್ಯ 28ನೇ ಮುಖ್ಯಮಂತ್ರಿ ಆಯ್ಕೆಗೆ ಎಲ್ಲಾ ಶಾಸಕರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದು ಸಿದ್ಧರಾಮಯ್ಯ ಸೋಮವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ಧಿ ಪ್ರಕಟವಾಗುತ್ತಿದ್ದಂತೆ ಇಲ್ಲಿನ ಅನೇಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜೈಕಾರಗಳನ್ನು ಹಾಕಿ ಸಂಭ್ರಮ ವ್ಯಕ್ತಪಡಿಸಿದರು.
ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಅಹಿಂದ ಮುಖಂಡರಾದ ತಾಳೇಮರದಹಳ್ಳಿ ಮಂಜುನಾಥ್, ಕೆ.ಎಂ. ಕೃಷ್ಣಮೂರ್ತಿ, ಚನ್ನಸಾಗರ ಡಿ.ಮಲ್ಲೇಶ್ ಮುಂತಾದವರು ಸಿದ್ಧರಾಮಯ್ಯ ಅವರಿಗೆ ಶುಭ ಹಾರೈಸಿದ್ದಾರೆ.