ಇಂದಿನಿಂದ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ಮಣಕೀಕೆರೆ ಗ್ರಾಮದ ಕರಿಯಮ್ಮ ದೇವಿ ಮತ್ತು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವವು ಮೇ 12 ರಿಂದ 17ರವರೆಗೆ ನಡೆಯಲಿದೆ. ಮೇ 12ರಂದು ಮದುವಣಗಿತ್ತಿ ಉತ್ಸವ, ಮದ್ದಿನ ಸೇವೆ, ಪುಷ್ಪಾಲಂಕಾರ. ಮೇ 13ರಂದು ಮೊದಲೋತ್ಸವ. ಮೇ 14ರಂದು ಆರತಿ ಬಾನ, ಭೂಕೈಲಾಸ ಉತ್ಸವ, ಗಂಗಾಸ್ನಾನ, ಅಮೋಘ ಬಾಣ ಬಿರುಸು ಮದ್ದಿನ ಪ್ರದರ್ಶನ ನಡೆಯಲಿದೆ. ಮೇ 15ರಂದುದೇವಿಯವರಿಗೆ ಗಂಗಾಸ್ನಾನ, ರಾಜಹಂಸ ಅಲಂಕಾರದ ಉತ್ಸವ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮವಿದೆ. ಮೇ 16ರಂದು ರಥೋತ್ಸವ ಮತ್ತು ಉಯ್ಯಾಲೋತ್ಸವ ಹಾಗೂ ದೇವಿ ಮಹಾತ್ಮೆ ನಾಟಕ ಏರ್ಪಡಿಸಲಾಗಿದೆ. ಮೇ 17ರಂದು ಸಿಡಿ ಅಡ್ಡಪಲ್ಲಕ್ಕಿ ಉತ್ಸವ, ಮಹಾಮಂಗಳಾರತಿ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ವಡ್ಡಗೆರೆ ಶಾಲೆಗೆ ಶೇ. 100 ಫಲಿತಾಂಶ
ತುಮಕೂರು: ಕೊರಟಗೆರೆ ತಾಲೂಕು ವಡ್ಡಗೆರೆಯ ಸರ್ಕಾರಿ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಅತ್ಯುನ್ನತ ಶ್ರೇಣಿಯಲ್ಲಿ 5, ಪ್ರಥಮ ಶ್ರೇಣಿ 29, ದ್ವಿತೀಯ ಶ್ರೇಣಿ 10 ಮತ್ತು ತೃತೀಯ ಶ್ರೇಣಿಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾರಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಭುವನೇಶ್ವರಯ್ಯ ಮತ್ತು ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
14ರಂದು ಸಹಕಾರ ಸಂಘ ವಾರ್ಷಿಕ ಸಭೆ
ತಿಪಟೂರು: ತಾಲೂಕು ನಿವೃತ್ತ ನೌಕರರ ವಿವಿದ್ದೋದ್ದೇಶ ಸಹಕಾರ ಸಂಘದ 2012- 13ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಸಂಘದ ಕಟ್ಟಡದ ಸಭಾಂಗಣದಲ್ಲಿ ಮೇ 14ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಅಧ್ಯಕ್ಷತೆ ವಿ.ಎನ್. ಮಹದೇವಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿ.ಟಿ. ಶಂಕರೇಗೌಡ ಆಗಮಿಸಲಿದ್ದಾರೆ. ಸಭೆಯಲ್ಲಿ ಇಲಾಖಾ ಅಧಿಸೂಚನೆಯಂತೆ ಸಂಘದ ಬೈಲಾ ತಿದ್ದುಪಡಿ, ಸಂಘದ ಲೆಕ್ಕಪತ್ರಗಳ ಮಂಡನೆ, ಚರ್ಚೆ ನಡೆಯಲಿದೆ. ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆ, ಬಸವೇಶ್ವರ ಜಯಂತಿ ಆಚರಿಸಲಾಗುವುದು.
ಎಸ್ಸೆಸ್ಸೆಲ್ಸಿ: ಉನ್ನತ ಶ್ರೇಣಿಯಲ್ಲಿ ತೇರ್ಗಡೆ
ತಿಪಟೂರು: ನಗರದ ಸುಮತಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಉದಾಶರೀಫ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.75ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಈಕೆ ಗಾಂಧಿನಗರದ ಫರ್ವೀಜ್ ಉಲ್ಲಾ ಷರೀಪ್ ಮತ್ತು ಆಯಿಶಾ ತಬಸುಂ ಅವರ ಪುತ್ರಿಯಾಗಿದ್ದು, ತನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪೋಷಕರ ಸಹಕಾರ ಕಾರಣ ಎಂದು ತಿಳಿಸಿದ್ದಾಳೆ.