ಕುಡಿವ ನೀರಿಗೆ ಗ್ರಾಮಸ್ಥರ ಆಗ್ರಹ
ಶ್ರೀರಂಗಪಟ್ಟಣ: ಕೆಆರ್ಎಸ್ ಜಲಾಶಯ ನೀರಿಲ್ಲದೇ ಬತ್ತಿ ಹೋಗಿದೆ. ಮಂಡ್ಯ- ಮೈಸೂರು ಸೇರಿ ಅನೇಕ ಪಟ್ಟಣ, ಗ್ರಾಮಾಂತರ ಪ್ರದೇಶಗಳಿಗೆ ಕುಡಿವ ನೀರಿನ ಹಾಹಾಕಾರ ಹೆಚ್ಚಾಗುವ ಸಮಯದಲ್ಲಿ ಕೆಆರ್ಎಸ್ ಸುತ್ತಮುತ್ತ ಇರುವ ಗ್ರಾಮಸ್ಥರು ಕುಡಿವ ನೀರಿನ ಬವಣೆ ಖಂಡಿಸಿ ಶನಿವಾರ ಭಾರಿ ಪ್ರತಿಭಟನೆ ನಡೆಸಿದರು.
ಹೊಂಗಳ್ಳಿ, ಹೊಸುಂಡವಾಡಿ, ಹುಲಿಕೆರೆ, ಹೊಸ ಆನಂದೂರು, ಮಂಟಿಗ್ರಾಮ, ಪಿ. ಹೊಸಹಳ್ಳಿ ಗ್ರಾಮಗಳಲ್ಲಿ ಕುಡಿವ ನೀರಿಗೆ ಆಹಾಕಾರ ಉಂಟಾಗಿದೆ. ಗ್ರಾಮದಲ್ಲಿ ಯಾವುದೇ ಭಾಗದಲ್ಲಿ ನೀರಿನ ಲಭ್ಯತೆ ಇಲ್ಲ. ಆದರೂ ತಮ್ಮ ಗ್ರಾಮದಲ್ಲಿರುವ ಒಂದೇ ಒಂದು ನಲ್ಲಿ ಮುಖಾಂತರ ಬರುವ ನೀರನ್ನು ಹಿಡಿದುಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಬಂದಿದೆ. ಜಲಾಶಯ ಬತ್ತಿ ಹೋಗುತ್ತಿರುವ ಹಿನ್ನೆಲೆ ಮೈಸೂರಿಗೂ ನೀರಿನ ಕೊರತೆ ಉಂಟಾಗಲಿದೆ. ಈಗಾಗಲೇ ಜಲಾಶಯದ ಕೆಳ ಭಾಗದಿಂದ ಪೈಪ್ಗಳನ್ನು ಹಾಕಿ ನೀರನ್ನು ಎತ್ತಿಕೊಂಡು ಮೈಸೂರಿಗೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ.
ನದಿಯಿಂದ ನಾಲೆಗಳ ಮೂಲಕ ನೀರು ಬರುತ್ತಿಲ್ಲ. ಹೀಗಾಗಿ, ನಾಲೆಗಳನ್ನು ಕುಡಿವ ನೀರಿಗಾಗಿ ಆಶ್ರಯಿಸಿರುವ ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಹೆಚ್ಚಾಗಿದೆ. ಈ ನಡುವೆ ವಿದ್ಯುತ್ ಅಭಾವ ಹೆಚ್ಚಾಗಿರುವುದರಿಂದ ಬೋರ್ವೆಲ್ಗಳಲ್ಲಿ ನೀರು ಎತ್ತುವುದೇ ಕಷ್ಟವಾಗಿದೆ. ಕುಡಿವ ನೀರಿನ ಸಮಸ್ಯೆ ಸಮರೋಪಾದಿಯಲ್ಲಿ ಪರಿಹರಿಸುವಂತೆ ಹೊಸ ಆನಂದೂರು ಪುಟ್ಟರಾಜು, ಮೇರುನ್ನಿಸಾ ಅಳಲು ತೋಡಿಕೊಂಡಿದ್ದಾರೆ.