ಜಾಗೃತಿ ತರಬೇತಿ ಶಿಬಿರಕ್ಕೆ ಚಾಲನೆ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿಯ ಅನ್ನಪೂರ್ಣೇಶ್ವರಿ ಭವನದಲ್ಲಿ 9 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಮಹಿಳಾ ಜಾಗೃತಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಆದಿಚುಂಚನಗಿರಿ ಕ್ಷೇತ್ರದ ಜಗದ್ಗುರು ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ತರಬೇತಿ ಶಿಬಿರ ಉದ್ಘಾಟಿಸಿದರು. ನಂತರ ರಾಜ್ಯಮಟ್ಟದ ಮಹಿಳಾ ಜಾಗೃತಿ ಕಾರ್ಯಕ್ರಮ ಕುರಿತು ಆಶೀರ್ವಚನ ನೀಡಿದರು.
ಯಾವುದೇ ಜಾತಿ, ಮತ, ಭೇದವಿಲ್ಲದೇ ಶಿಬಿರಾರ್ಥಿಗಳು 1 ವಾರ ಕಾಲ ನಡೆಯುವ ಈ ಸಂಸ್ಕೃತಿ ಶಿಬಿರದಲ್ಲಿ ರಾಜ್ಯದ 12 ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ಉಚಿತ ಊಟ, ವಸತಿ, ಸಮವಸ್ತ್ರ, ನಿತ್ಯೋಪಯೋಗಿ ವಸ್ತುಗಳು, ಸಂಸ್ಕಾರ ಸೌರಭ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಹಿಂದೂ ಸೇವಾ ಪ್ರತಿಷ್ಠಾನದ 10 ಮಂದಿ ಭಗಿನಿಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಆರ್.ನರಸಿಂಹಯ್ಯ, ಜ್ಯೋತಿಷಿ ಎನ್.ಎಸ್. ವಿಶ್ವಪತಿಶಾಸ್ತ್ರಿ, ಸರ್ಕಲ್ ಇನ್ಸ್ಪೆಕ್ಟರ್ ರಾಜು, ಬೆಳ್ಳೂರಿನ ಎಸ್.ಐ. ರೇಖಾ, ಶ್ರೀಕ್ಷೇತ್ರದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮತ್ತು ಶ್ರೀಕ್ಷೇತ್ರದ ಶಾಖಾಮಠಗಳ ಸ್ವಾಮೀಜಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಶ್ರೀಕ್ಷೇತ್ರದ ಸಂಸ್ಕೃತ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಶಿಬಿರಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾಂಶುಪಾಲ ಪ್ರೊ. ಸಿ.ನಂಜುಂಡಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.
ಶ್ರೀಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.