ಡಿಸೆಂಬರ್ನಲ್ಲಿ ಹೇಮಾವತಿ ನೀರು
ಕನ್ನಡಪ್ರಭ ವಾರ್ತೆ ಅರಸೀಕೆರೆ ಮೇ 11
ಪಟ್ಟಣದ ಜನತೆಗೆ ಹೇಮಾವತಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಡಿಸೆಂಬರ್ ಕೊನೆಯ ವಾರದ ವೇಳೆಗೆ ಹೇಮಾವತಿಯ ಸಿಹಿ ನೀರು ದಿನದ 24 ಗಂಟೆಯೂ ಪಟ್ಟಣದ ಜನತೆಗೆ ಪೂರೈಕೆಯಾಗಲಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
121 ಕೋಟಿ ರು. ವೆಚ್ಚದಲ್ಲಿ ಚನ್ನರಾಯಪಟ್ಟಣದ ಗನಿಘಡದಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಸಮಾರೋಪಾದಿಯಲ್ಲಿ ಸಾಗಿದ್ದು ಕೊಳವೆ ಮೂಲಕ ಪಟ್ಟಣ ತಲುಪಿರುವ ಹೇಮಾವತಿ ನೀರಿನ ರಭಸವನ್ನು ಶುಕ್ರವಾರ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದ ಬಳಿ ಪರೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಹಾಜರಿದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ ಕೊಳವೆ ಮೂಲಕ ಸುಮಾರು 30 ಅಡಿಗೂ ಎತ್ತರಕ್ಕೆ ಚಿಮ್ಮಿದ ನೀರನ್ನು ಕಂಡು ಹರ್ಷಿತರಾದರು.
5 ನದಿ ಹರಿದರೂ ಕಲುಷಿತ ನೀರು ಸೇವನೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ನದಿಗಳು ಹರಿದರೂ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನತೆ ಪ್ಲೋರೈಡ್ಯುಕ್ತ ಕಲುಷಿತ ನೀರನ್ನೇ ಸೇವಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದ್ದು, ಇದರಿಂದ ಅನೇಕ ರೋಗ ರುಜಿನಗಳಿಂದ ಜನತೆ ನರಳುತ್ತಿದ್ದಾರೆ.
ತಾವು 2008ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ಆಶ್ವಾಸನೆಯಂತೆ ವಿಧಾನಸಭೆಯಲ್ಲಿ ಈ ವಿಚಾರವನ್ನು ಸಮರ್ಥವಾಗಿ ಮಂಡಿಸಿದ ಪರಿಣಾಮ ಅನೇಕ ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರ ಮಂಜೂರಾತಿ ನೀಡಿದ್ದರ ಪ್ರತಿಫಲವಾಗಿ ಸುಮಾರು 400 ಕೋಟಿಗೂ ಮಿಗಿಲಾಗಿ ಕ್ಷೇತ್ರದಲ್ಲಿ ನಾನಾ ನೀರಾವರಿ ಯೋಜನೆಗಳು ಪ್ರಸ್ತುತ ಚಾಲನೆಯಲ್ಲಿವೆ ಎಂದು ತಿಳಿಸಿದರು.
121 ಕೋಟಿ ವೆಚ್ಚದಲ್ಲಿ ಚನ್ನರಾಯಪಟ್ಟಣದ ಗನ್ನಿಘಡದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದೇ ರೀತಿ ನಾನಾ ಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನೆಯಡಿ 158 ಕೋಟಿ ವೆಚ್ಚದಲ್ಲಿ ಕ್ಷೇತ್ರದ 472 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದ ಅವರು, ಈಗಾಗಲೇ ಯಗಚಿ ನದಿಮೂಲದಿಂದ ಬಾಣಾವರ ಹಾಗೂ ಕಸಬಾ ಹೋಬಳಿಯ ಕೆಲವು ಗ್ರಾಮಗಳಿಗೆ ಕೊಳವೆ ಮೂಲಕ ನೀರು ಪೂರೈಕೆಯಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ನಗರ ನೀರು ಹಾಗೂ ಒಳಚರಂಡಿ ಮಂಡಲಿ ಹಾಸನ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಮಲ್ಲೇಶ್ನಾಯಕ್ ಮಾತನಾಡಿ ರಾಜ್ಯದಲ್ಲೇ ಪ್ರಥಮಬಾರಿಗೆ 24ಘಿ7 ಅವಧಿ ನೀರು ಪೂರೈಸುವ ಕಾಮಗಾರಿ ಅರಸೀಕೆರೆಯಲ್ಲಿ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಯಾವುದೇ ಲೋಪವಾಗದ ರೀತಿ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಕಾಮಗಾರಿ ಸಾಗಿದ್ದು ಡಿಸೆಂಬರ್ ಅಂತ್ಯದ ವೇಳೆಗೆ ಅರಸೀಕೆರೆ ನಾಗರಿಕರಿಗೆ ಶುದ್ಧ ಹೇಮಾವತಿಯ ಸಿಹಿ ನೀರನ್ನ ಪೂರೈಸಲಾಗುವುದೆಂದು ಭರವಸೆ ನೀಡಿದರು.
ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಎನ್.ಎಸ್.ಸಿದ್ದರಾಮಶೆಟ್ಟಿ, ಎಂ.ಸಮೀವುಲ್ಲ, ಪುರಸಭೆ ಮುಖ್ಯಾಧಿಕಾರಿ ರಂಗೇಗೌಡ, ಶ್ರೀನಿವಾಸ್, ಮಂಜುನಾಥ್, ಕಾಂತೇಶ್ ಇತರರು ಇದ್ದರು.