ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತವರಿನಲ್ಲಿ ಸಿದ್ದುಗೆ ಅದ್ಧೂರಿ ಸ್ವಾಗತ

Rashmi Kasaragodu
Updated On : 12 May 2013, 12:10 pm

ಕ.ಪ್ರ. ವಾರ್ತೆ  ಮೈಸೂರು  ಮೇ 11
ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ಟೋಲ್‌ಗೇಟ್ ಬಳಿ ಶನಿವಾರ ರಾತ್ರಿ ಅದ್ಧೂರಿ ಸ್ವಾಗತ ದೊರೆಯಿತು.
ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸುತ್ತಿರುವ ವಿಚಾರ ತಿಳಿದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಸಂಜೆಯಿಂದಲೇ ಕೊಲಂಬಿಯಾ ಏಷಿಯಾ ಆಸ್ಪತ್ರೆ ಎದುರು ಕಾಯುತ್ತಿದ್ದರು.
ಈಗ ಬರ್ತಾರೆ, ಆಮೇಲೇ ಬರ್ತಾರೇ, ಇದೋ ಬಂದೇ ಬಿಟ್ರೂ ಎನ್ನುತ್ತಲೇ ರಾತ್ರಿ 9 ರವರೆಗೆ ಕಾದು ನಿಂತಿದ್ದರು. ರಾತ್ರಿ 9.05ಕ್ಕೆ ಸಿದ್ದರಾಮಯ್ಯ ಅವರಿದ್ದ ವಾಹನವು ಟೋಲ್‌ಗೇಟ್‌ಗೆ ಪ್ರವೇಶಿಸಿತು. ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಅವರಿಗೆ ಜೈಕಾರ ಕೂಗುತ್ತಲೇ ಹರ್ಷ ವ್ಯಕ್ತಪಡಿಸಿದರು. ಪಟಾಕಿ ಸಿಡಿಸಿ ತಮ್ಮ ಸಂತೋಷ ಹೊರ ಚೆಲ್ಲಿದರು. ಮೈಸೂರು ಪೇಟ, ಹಾರ, ರೇಷ್ಮೆ ಶಾಲು, ಹೂವಿನ ಗುಚ್ಛ.... ಹೀಗೆ ನಾನಾ ರೀತಿಯಲ್ಲಿ ಅವರ ಅಭಿಮಾನಿಗಳು ಸ್ವಾಗತ ಕೋರಿದರು. ಕೆ.ಆರ್. ಬ್ಲಾಕ್ ಉಪಾಧ್ಯಕ್ಷ ಲೋಕೇಶ್ ಪಿಯಾ ಮತ್ತು ಇತರರು ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಪ್ರಮಾಣ ವಚನ ಬಳಿಕ ದೆಹಲಿಗೆ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನಂತರ ದೆಹಲಿಗೆ ತೆರಳಿ, ಪಕ್ಷದ ಹೈಕಮಾಂಡ್ ಭೇಟಿಯಾಗಿ, ಸಚಿವ ಸಂಪುಟ ರಚಿಸುವ ಸಂಬಂಧ ಚರ್ಚಿಸುತ್ತೇನೆ ಎಂದರು.
ನನ್ನನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದಕ್ಕೆ ರಾಜ್ಯದ ಎಲ್ಲೆಡೆಯಿಂದ ಉತ್ತಮ ಬೆಂಬಲ ಸಿಗುತ್ತಿದೆ. ಜನ ಖುಷಿ ಆಗಿದ್ದಾರೆ. ಮೈಸೂರಿಗೆ ನಾನು ಬರುತ್ತಿರುವುದು ಹೊಸದೇನಲ್ಲ. ಕಾರ್ಯಕರ್ತರು, ಜನ ಖುಷಿ ಪಡುತ್ತಿದ್ದಾರೆ, ಇದನ್ನು ನೋಡಿ ನನಗೂ ಸಂತೋಷ ಆಗಿದೆ ಎಂದ ಅವರು, ನಾಳೆ (ಮೇ 12) ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸುವುದಾಗಿ ಹೇಳಿದರು.
ದಂಡು....: ಶಾಸಕರಾದ ಎಚ್.ಎಸ್. ಮಹದೇವಪ್ರಸಾದ್, ವಾಸು, ಮಾಜಿ ಸಚಿವ ಕೆ. ವೆಂಕಟೇಶ್, ಮಾಜಿ ಶಾಸಕರಾದ ಎಂ. ಸತ್ಯನಾರಾಯಣ,  ಡಾ.ಎನ್.ಎಲ್. ಭಾರತೀಶಂಕರ್, ಕಾಂಗ್ರೆಸ್ ನಗರಾಧ್ಯಕ್ಷ ಸಿ. ದಾಸೇಗೌಡ, ಜಿಲ್ಲಾಧ್ಯಕ್ಷ ಆರ್. ಧರ್ಮಸೇನ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್, ಮಾಜಿ ಮೇಯರ್‌ಗಳಾದ ದಕ್ಷಿಣಾಮೂರ್ತಿ, ಮೋದಾಮಣಿ, ಅಯೂಬ್ ಖಾನ್, ಪುಷ್ಪಲತಾ ಚಿಕ್ಕಣ್ಣ, ಆರೀಫ್ ಹುಸೇನ್, ಟಿ.ಬಿ. ಚಿಕ್ಕಣ್ಣ, ಪಾಲಿಕೆ ಸದಸ್ಯ ಡಿ. ನಾಗಭೂಷಣ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ, ಮುಖಂಡರಾದ ರಾಕೇಶ್ ಸಿದ್ದರಾಮಯ್ಯ, ಪಿ. ನಾಗರಾಜ್, ಶೌಕತ್ ಅಲಿಖಾನ್, ಅಬು ಅಹಮದ್, ಕೆ. ಉಮಾಶಂಕರ್, ಪಿ. ನಾಗರಾಜ್ ಮೊದಲಾದವರು ಇದ್ದರು.
ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್, ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್, ಎಸ್ಪಿ ಆರ್. ದಿಲೀಪ್ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement