ನಗರದಲ್ಲಿ ಮಳೆ- ಗಾಳಿಗೆ ಧರೆಗುರುಳಿದ ಮರಗಳು
ತುಮಕೂರು: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ನಗರದಲ್ಲಿ ಹಲವು ಕಡೆ ಮರಗಳು ಧರೆಗೆ ಉರುಳಿದವು. ಶಿರಾಗೇಟ್, ಎಸ್ಐಟಿ, ಸೋಮೇಶ್ವರಪುರಂ, ವಿಜಯನಗರ, ಗೋಕುಲ ಹೀಗೆ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಮರಗಳು ಧರೆಗೆ ಉರುಳಿದವು.
ಭಾರಿ ಗುಡುಗು ಸಿಡಿಲು, ಮಳೆ ಗಾಳಿಯಿಂದಾಗಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಕೈಕೊಟ್ಟಿದ್ದರಿಂದ ಇಡೀ ನಗರವೇ ಕತ್ತಲಲ್ಲೇ ಮುಳುಗಿಹೋಯಿತು. ತುಮಕೂರಿನ ಭದ್ರಮ್ಮ ಛತ್ರದ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.
ರಾತ್ರಿ ಸುರಿದ ಭಾರಿ ಮಳೆ ಗಾಳಿಯಿಂದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಮನೆಯವರು ಜಾಗರಣೆ ಮಾಡುವಸ್ಥಿತಿ ಉಂಟಾಯಿತು.
ಮಳೆಗಾಳಿಯಿಂದ ಬೆಸ್ಕಾಂ ಉಪವಿಭಾಗ-1 ಮತ್ತು ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಒಟ್ಟು 54 ಪರಿವರ್ತಕಗಳಿಂದ 7,79 ಲಕ್ಷ ನಷ್ಟ ಬೆಸ್ಕಾಂಗೆ ಉಂಟಾಗಿದೆ. ಮಳೆಯ ಆರ್ಭಟ ಶನಿವಾರ ಸಂಜೆ ಕೂಡ ಮುಂದುವರಿದಿದ್ದು ಹಲವಾರು ಮರಗಳು ಮತ್ತೆ ಧರೆಗೆ ಉಳಿದಿದೆ. ಒಟ್ಟಾರೆಯಾಗಿ ಸುಡು ಬಿಸಿಲಿನಲ್ಲಿ ಬಸವಳಿದು ಹೋಗಿದ್ದ ಮಳೆಯ ಆರ್ಭಟ ಜೋರಾಗಿದ್ದರೂ ಹಲವಾರು ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ.
ಕೆಲವು ಕಡೆ ಬೈಕ್ಗಳು ಹಾಗೂ ಕಾರುಗಳ ಮೇಲೆ ತೆಂಗಿನ ಮರದ ಸೋಗೆ ಗರಿ ಬಿದ್ದು ಕಾರುಗಳು ಜಖಂಗೊಂಡಿವೆ.