ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಕಂಡಕ್ಟರ್ ಸಾವು
ಕೋಲಾರ: ರಸ್ತೆ ಬದಿ ನಿಂತಿದ್ದ ಸರಕು ಸಾಗಾಣೆ ಲಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ರಾಜಹಂಸ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ನಿರ್ವಾಹಕ ಮೃತಪಟ್ಟಿದ್ದು ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ನಗರದ ಸಮೀಪದ ಕೊಂಡರಾಜನಹಳ್ಳಿ ಬಳಿಯ ದರ್ಗಾ ಮುಂಬಾಗ ಶನಿವಾರ ಈ ದುರ್ಘಟನೆ ನಡೆದಿದೆ. ರಾಸಾಯನಿಕ ಗೊಬ್ಬರ ತುಂಬಿದ್ದ ಲಾರಿಯನ್ನು ರಸ್ತೆ ಬದಿ ನಿಲ್ಲಿಸಲಾಗಿತ್ತು. ಬೆಂಗಳೂರಿನಿಂದ ಚನ್ನೈಗೆ ಹೊರಟಿದ್ದ ರಾಜಹಂಸ ಬಸ್ ಚಾಲಕನ ಅಜಾಗರೂಕತೆಯಿಂದ ಲಾರಿಯ ಹಿಂಬಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಎಡ ಭಾಗ ನಜ್ಜುಗುಜ್ಜಾಗಿದೆಯಲ್ಲದೆ ಬಸ್ಸಿನ ನಿರ್ವಾಹಕ ಮಂಜುನಾಥ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಮೃತ ನಿರ್ವಾಹಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ನಿವಾಸಿ ಎಂದು ಗುರುತಿಸಿಲಾಗಿದೆ. ಗಾಯಗೊಂಡಿರುವ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.