ಸೊಗಡು ಕಾರ್ಯವೈಖರಿಗೆ ಮಾವ ಶ್ಲಾಘನೆ, ಅಳಿಯ ಟೀಕೆ
ಕ.ಪ್ರ.ವಾರ್ತೆ ತುಮಕೂರು ಮೇ 11
ಮಾಜಿ ಶಾಸಕ ಸೊಗಡು ಶಿವಣ್ಣ ಅವರ ಕಾರ್ಯವೈಖರಿಗೆ ಮಾವನಿಂದ ಶ್ಲಾಘನೆ, ಅಳಿಯನಿಂದ ಟೀಕೆ ಕೇಳಿ ಬಂದಿದ್ದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ.
ತುಮಕೂರು ನಗರ ಬಿಜೆಪಿ ಮಾಜಿ ಶಾಸಕ ಸೊಗಡು ಶಿವಣ್ಣ ಅವರ ಕಾರ್ಯವೈಖರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಾ. ರಫೀಕ್ ಅಹಮದ್ ಅವರ ಮಾವ ಎಸ್. ಷಫಿ ಅಹಮದ್ ಶ್ಲಾಘಿಸಿದರು. ಕಳೆದ 20 ವರ್ಷಗಳಿಂದ ಸೊಗಡು ಶಿವಣ್ಣ ತಮ್ಮ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು. ಅವರ ಒಳ್ಳೆಯ ಕೆಲಸ ಮುಂದುವರಿಸುವ ಭರವಸೆ ನೀಡಿದರು.
ನಂತರ ಮಾತನಾಡಿದ ಷಫಿ ಅವರ ಅಳಿಯ ಹಾಗೂ ಶಾಸಕ ಡಾ. ರಫೀಕ್ ಅಹಮದ್, ಸೊಗಡು ಶಿವಣ್ಣ ಅವರ ಕಳೆದ 20 ವರ್ಷಗಳ ದುರಾಡಳಿತ ನೋಡಿ ಬೇಸತ್ತು, ತಮಗೆ ಜನತೆ, ವಿಶೇಷವಾಗಿ ಯುವಜನತೆ ಬೆಂಬಲಿಸಿದ್ದಾರೆ. ಕಳೆದ 20 ವರ್ಷಗಳಿಂದ ತುಮಕೂರು ನಗರ ಹಿಂದುಳಿದಿದೆ. ಯೋಜನೆಗಳು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಭ್ರಷ್ಟಾಚಾರ ನಡೆದಿದೆ. ಸೊಗಡು ಅವರ ಒಳ್ಳೆಯ ಕೆಲಸ ಮುಂದುವರಿಸುವೆ. ಹೊಸ ಯೋಜನೆ ತರುವೆ ಎಂದು ರಫೀಕ್ ಅಹಮದ್ ಭರವಸೆ ನೀಡಿದರು.
ಪರಮೇಶ್ವರ್ ಸೋಲು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೋಲನ್ನು ತಾವು ಕನಸಲ್ಲೂ ಕಾಣಲು ಸಾಧ್ಯವಿರಲಿಲ್ಲ. ಆದರೆ, ಕೊರಟಗೆರೆ ಜನತೆ ತೀರ್ಪು ನೀಡಿದ್ದಾರೆ. ತೀರ್ಪನ್ನು ಒಪ್ಪಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಗಾದಿ ಹಿನ್ನೆಲೆಯಲ್ಲಿ ಕ್ಷೇತ್ರದ ಕಡೆ ಗಮನ ಹರಿಸಿರಲಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರಾಗುವುದಕ್ಕೂ 3 ವರ್ಷ ಮುನ್ನ ಕೂಡ ಕ್ಷೇತ್ರದ 4 ಕಡೆ ಗಮನಹರಿಸಿರಲಿಲ್ಲವಲ್ಲ ಎಂಬ ಪ್ರಶ್ನೆಗೆ ತಬ್ಬಿಬ್ಬಾದ ಷಫಿ ಅಹಮದ್, ತಪ್ಪಾಗಿದೆ. ಜನ ಬುದ್ಧಿ ಕಲಿಸಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಅಭಿನಂದನೆ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಗಾದಿಗೇರಿಸಿದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಷಫಿ ಅಹಮದ್, ಸ್ಥಿರ ಹಾಗೂ ಸುಭದ್ರ ಸರ್ಕಾರವನ್ನು ನೀಡಲು ಕಾಂಗ್ರೆಸ್ ಬದ್ಧವಾಗಿದೆ. ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಪಕ್ಷದ ಹಿತದೃಷ್ಟಿಯಿಂದ ಅಹಿಂದ ಮುಖಂಡರಾಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಗಾದಿಗೇರಿಸಲಾಗಿದೆ. ಜನತೆಯ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ಷಫಿ ಭರವಸೆ ನೀಡಿದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೇಂದ್ರದಲ್ಲಿ ರೇಲ್ವೆ ಖಾತೆ ನೀಡುವ ಸುಳಿವನ್ನು ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ 4 ಮಂದಿ ಶಾಸಕರನ್ನು ಗೆಲ್ಲಿಸಲು ಸಹಕರಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಷಫಿ ತಿಳಿಸಿದರು.
ಸಹಕಾರ ಖಾತೆಗೆ ಕೋರಿಕೆ: ಮಧುಗಿರಿಯಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಸಹಕಾರ ಖಾತೆ ನೀಡುವಂತೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ಗೆ ಕೋರುವುದಾಗಿ ಷಫಿ ಅಹಮದ್ ತಿಳಿಸಿದರು. ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಕಾಂಗ್ರೆಸ್ ಕಾನೂನು ವಿಭಾಗದ ಜಿಲ್ಲಾ ಮುಖ್ಯಸ್ಥ ಹಾಗೂ ವಕೀಲ ಟಿ.ಎಸ್. ನಿರಂಜನ್ ಇತರರು ಉಪಸ್ಥಿತರಿದ್ದರು.