ಹುಲಿನಾಯ್ಕರ್ ಕಾಲೇಜು ಎದುರಿನ ಜಾಗ ಸರ್ಕಾರದ್ದು
ಕ.ಪ್ರ. ವಾರ್ತೆ ತುಮಕೂರು ಮೇ 11
ನಗರದಹೊರವಲಯದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಎದುರಿನ (ಕಾಂಪೌಂಡ್ ನಿರ್ಮಿಸಲಾಗಿದೆ) 5 ಎಕರೆ ಗುಂಡು ತೋಪು ಸರ್ಕಾರದ್ದು. ಆ ಜಾಗ ನಮ್ಮಪ್ಪನದ್ದೂ ಅಲ್ಲ. ಹುಲಿನಾಯ್ಕರ್ ಅಪ್ಪನದ್ದೂ ಅಲ್ಲ. ಅಥವಾ ಹುಲಿನಾಯ್ಕರ್ ಅವರದ್ದೂ ಅಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಮಾರ್ಮಿಕವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಲಿನಾಯ್ಕರ್ ಆ ಜಾಗ ನಮ್ಮಪ್ಪನದ್ದಲ್ಲ ಎಂದು ಹೇಳಿರುವುದು ವರದಿಯಾಗಿದೆ. ಈ ಜಾಗದ ವಿಷಯ ಕುರಿತು ಈಗಾಗಲೇ ಹೇಳಿಯಾಗಿದೆ. ಮತ್ತೆ ಹೇಳುತ್ತಿದ್ದೇನೆ. ಆ ಜಾಗ ಸಾರ್ವಜನಿಕರ ಸ್ವತ್ತು. ಸರ್ಕಾರಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿದರು.
ಮುಳ್ಳಿನ ಮೇಲಿನ ಬಟ್ಟೆಯನ್ನು ಹುಷಾರಾಗಿ ಬಿಡಿಸಿಕೊಳ್ಳಬೇಕು. ಇಲ್ಲದಿದ್ದರೆ ಏನಾಗುತ್ತೆ ಗೊತ್ತಲ್ಲ. ಅದೇ ಹುಲಿನಾಯ್ಕರ್‌ಗೂ ಆಗುತ್ತೆ ಎಂದು ಮಾರ್ಮಿಕವಾಗಿ ನುಡಿದ ಸೊಗಡು, ತಾವು ವಿನಾಕಾರಣ ಯಾರನ್ನೂ ಟೀಕಿಸುವುದೂ ಇಲ್ಲ. ದ್ವೇಷಿಸುವುದೂ ಇಲ್ಲ. ಹುಲಿನಾಯ್ಕರ್ ಮೇಲಿನ ಜಾಗದ ಕುರಿತು ತಮ್ಮ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು.
ಕುಲಬಾಂಧವನಿಂದ ಟೋಪಿ: ಈ ಜಾಗಕ್ಕೆ ಹುಲಿನಾಯ್ಕರ್ ಅವರನ್ನು ತಗುಲಿ ಹಾಕಿದ್ದು ಅವರ ಆಪ್ತ ಸ್ನೇಹಿತ, ಪ್ರಭಾವಿ, ಕುಲಬಾಂಧವರೊಬ್ಬರು. ಅವರ ಮಾತು ಕೇಳಿ ಹುಲಿನಾಯ್ಕರ್ ಸಮಸ್ಯೆ ಎದುರಿಸುತ್ತಿದ್ದಾರೆ. ಹುಲಿನಾಯ್ಕರ್‌ಗೆ ಈ ಕುಲಬಾಂಧವ ಟೋಪಿ ಹಾಕಿದ್ದಾನೆ. ಇದಕ್ಕೆ ತಾವೇನೂ ಮಾಡಲಾಗದು. ಹುಲಿನಾಯ್ಕರ್ ಮುತ್ಸದ್ಧಿ. ಆದರೆ, ಅವರು ತಮ್ಮ ವಿರುದ್ಧ ಏನೇನೋ ಮಾತನಾಡಿದ್ದಾರೆ. ಇದಕ್ಕೆಲ್ಲಾ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾಖಲೆಗಳಿವೆ... ಸಾರ್ವಜನಿಕರ ಸ್ವತ್ತು ಉಳಿಸುವುದು ಸಾರ್ವಜನಿಕರ ಕರ್ತವ್ಯ. ಹಾಗೆಯೇ ಜನಪ್ರತಿನಿಧಿಗಳ ಕರ್ತವ್ಯ. ಈ ಮೇಲಿನ 5 ಎಕರೆ ಗುಂಡು ತೋಪು ಉಳಿಸುವುದು ಕೂಡ ಕರ್ತವ್ಯವೇ. ಈ ಕುರಿತು ತಮ್ಮ ಬಳಿ ಬೇಕಾದಷ್ಟು ದಾಖಲೆಗಳಿವೆ. ಸಮಯ ಬಂದಾಗ ಬಹಿರಂಗಪಡಿಸಲು ಸಿದ್ಧ ಎಂದು ಸೊಗಡು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೇನುಗೂಡಿಗೆ ಕೈಯಿಕ್ಕಲ್ಲ: ತಾವು ವಿನಾಕಾರಣ ಜೇನುಗೂಡಿಗೆ ಕೈಯಿಕ್ಕಲ್ಲ. ಜೇನುಗೂಡಿಗೆ ಕೈಯಿಕ್ಕಿದ್ದರೆ ಏನಾಗುತ್ತೆ ಗೊತ್ತಲ್ಲ ಎಂದು ಮಾರ್ಮಿಕವಾಗಿ ನುಡಿದ ಸೊಗಡು, ಸಮಯ, ಸಂದರ್ಭ ಬಂದಾಗ ಎಲ್ಲ ದಾಖಲೆ ಬಹಿರಂಗಪಡಿಸುವುದಾಗಿ ಸವಾಲೆಸೆದರು.
ರಾಜಕಾರಣ ಸರ್ವಿಸ್: ರಾಜಕಾರಣ ಅಂದರೆ ಬಂಡವಾಳ ಹಾಕುವುದಲ್ಲ. ಸರ್ವಿಸ್. ತಾವು ಬಂಡವಾಳ ಹಾಕಲು ರಾಜಕಾರಣಕ್ಕೆ ಬಂದಿಲ್ಲ. ರಾಜಕಾರಣಿಗಳು ಬಂದಿರುವುದು ಸೇವೆ ಮಾಡಲು. ಇದನ್ನು ಎಲ್ಲರೂ ಆರಿಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ನಂದೀಶ್, ನಗರ ಘಟಕದ ರಮೇಶಾಚಾರ್ ಇತರರು ಉಪಸ್ಥಿತರಿದ್ದರು.