ಹುಳಿಯಾರು ಸುತ್ತಮುತ್ತ ವರುಣನ ಆರ್ಭಟ
ಕ.ಪ್ರ. ವಾರ್ತೆ ಹುಳಿಯಾರು ಮೇ 11
ಶುಕ್ರವಾರ ಸಂಜೆ ಸುಮಾರು ಮೂರು- ನಾಲ್ಕು ತಾಸು ಮಿಂಚು, ಗುಡುಗು, ಗಾಳಿ ಸಹಿತ ಭಾರಿ ಮಳೆ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದಿದೆ.
ಶುಕ್ರವಾರ ಸಂಜೆ ಆರು ಗಂಟೆ ಸುಮಾರಿನಲ್ಲಿ ಮಿಂಚು, ಗುಡುಗಿನೊಂದಿಗೆ ಪ್ರಾರಂಭವಾದ ಮಳೆ, ನಂತರ ತನ್ನ ಆರ್ಭಟ ಹೆಚ್ಚಿಸಿಕೊಂಡು ರಾತ್ರಿ ಒಂಭತ್ತರವರೆಗೆ ಸುರಿದಿದೆ. ಕಳೆದ ಕೆಲ ದಿನಗಳ ಬೇಸಿಗೆಯ ಬಿಸಿ ತಣ್ಣಗಾಗಿದ್ದು, ಪಟ್ಟಣ ಬಸ್ ನಿಲ್ದಾಣ, ರಸ್ತೆಯಲ್ಲೆಲ್ಲಾ ನೀರು ತುಂಬಿ ಹರಿದಿತ್ತು. ಅಲ್ಲದೆ, ಬಿಸಿಲಿನಿಂದ ಕಾದಿದ್ದ ಭೂಮಿ ಈ ಮಳೆಯಿಂದಾಗಿ ತಂಪಾಗಿದ್ದು, ರೈತನ ಮೊಗದಲ್ಲಿ ಸಂತಸ ಮನೆ ಮಾಡಿದ್ದು, ಮುಂದಿನ ದಿನದಲ್ಲಿ ಉತ್ತಮ ಮಳೆಯಾದರೆ ಉತ್ತಮ ಇಳುವರಿ ಸಾಧ್ಯ ಎಂಬುದು ರೈತರ ಆಶಯ. ಮಳೆಯಿಂದ ಹೊಲಗಳನ್ನು ಬಿತ್ತನೆಗಾಗಿ ಕೆಲ ರೈತರು ಉಳುಮೆ ಮಾಡುತ್ತಿರುವುದು ಶನಿವಾರ ಕಂಡುಬಂದಿತು.
ಹುಳಿಯಾರು ಸಮೀಪದ ಎಚ್. ಮೇಲನಹಳ್ಳಿ ಗ್ರಾಮದಲ್ಲಿ ಶುಕ್ರವಾರದ ಸಂಜೆ ಮಳೆ ಹಾಗೂ ಬಾರಿ ಗಾಳಿಯಿಂದಾಗಿ ಸುಮಾರು ನೂರಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿದ್ದು, ಅಡಕೆ ಮರ, ಬಾಳೆಗಿಡಗಳಿಗೂ ಮಳೆ- ಗಾಳಿಯಿಂದ ಹಾನಿಗೊಳಗಾಗಿವೆ. ಅಲ್ಲದೆ, ಇದೇ ಗ್ರಾಮದ ಎರಡು ಗುಡಿಸಲು ಸೇರಿದಂತೆ ಹತ್ತು ಮನೆಗಳ ಛಾವಣಿ ಹಾರಿಹೋಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಕಂದಾಯ ಇಲಾಖೆಯ ತಹಸೀಲ್ದಾರ್ ಕಾಮಾಕ್ಷಿ ಹಾಗೂ ಕಂದಾಯಾಧಿಕಾರಿ ರಂಗನಾಥ ಹಾನಿಗೊಳಗಾದ ಕುಟುಂಬದವರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.