ಕಂಬದಲ್ಲೇ ಶವವಾದ ಲೈನ್‌ಮನ್
ತಿಪಟೂರು: ನಗರದ ಕಂಚಾಘಟ್ಟ ಹೊರವಲಯದಲ್ಲಿ ವಿದ್ಯುತ್ ತಂತಿ ಎಳೆಯಲು ಕಂಬ ಏರಿ ಕುಳಿತ ಸಹಾಯಕ ಲೈನ್‌ಮನ್ ಒಬ್ಬರು ಆಕಸ್ಮಿಕ ವಿದ್ಯುತ್ ಪ್ರವಹಿಸಿ ಕಂಬದಲ್ಲೇ ಸಾವಿಗೀಡಾಗಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಕಂಚಾಘಟ್ಟ ಹೊರವಲಯದ ಬೆಸ್ಕಾಂ ಕಂಬದಲ್ಲಿ ತಂತಿಯೊಂದು ತುಂಡಾಗಿದ್ದರಿಂದ ಅದರ ರಿಪೇರಿಗಾಗಿ ತಿಪಟೂರು ಬೆಸ್ಕಾಂ ಕಾರ್ಯ ಮತ್ತು ಪಾಲನಾ ಘಟಕ 1ರ ಲೈನ್‌ಮನ್‌ಗಳಾದ ಕೃಷ್ಣಮೂರ್ತಿ, ರಾಜು ಮತ್ತು ಎಸ್. ಮಂಜುನಾಥ್ ಎಂಬ ಮೂವರು ಲೈನ್‌ಮನ್‌ಗಳು ಹೋಗಿದ್ದು ಮಂಜುನಾಥ ಕಂಬ ಏರಿದ್ದಾರೆ. ಏರುವ ಮುನ್ನವೇ ಲೈನ್ ಟ್ರಿಪ್ ಮಾಡಿದ್ದರೂ ಮತ್ತೊಂದು ಭಾಗದ ಸಂಪರ್ಕದಿಂದ ದಿಢೀರ್ ಎಂದು ವಿದ್ಯುತ್ ಪ್ರವಹಿಸಿದ ತಕ್ಷಣವೇ ಮಂಜುನಾಥ್ ಸತ್ತು ಕಂಬದಲ್ಲೇ ಶವವಾದರು. ಈ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿತ್ತು.
ಸ್ಥಳಕ್ಕೆ ಶಾಸಕ ಕೆ. ಷಡಕ್ಷರಿ ಮತ್ತು ಕೆಜೆಪಿ ಮುಖಂಡ ಲೋಕೇಶ್ವರ ಭೇಟಿ ನೀಡಿ ಸಂಬಂಧಪಟ್ಟವರಿಗೆ ಸಾಂತ್ವನ ಹೇಳಿ ಶವವನ್ನು ಬೇಗ ಕೆಳಗಿಳಿಸಿ ಮುಂದಿನ ಕೆಲಸ ಕಾರ್ಯ ನೆರವೇರಿಸಬೇಕೆಂದು ತಿಳಿಸಿದರು.
ಮೃತ ಮಂಜುನಾಥ್‌ಗೆ ಮದುವೆಯಾಗಿ 5 ವರ್ಷವಾಗಿದ್ದು 1 ವರ್ಷದ ಮಗುವಿದ್ದು ಹೆಂಡತಿ, ತಂದೆ ನಿವೃತ್ತ ಲೈನ್‌ಮನ್ ಶಿವಲಿಂಗಪ್ಪ ಮತ್ತು ತಾಯಿಯನ್ನು ಅಗಲಿದ್ದಾರೆ.
ಸುದ್ದಿ ತಿಳಿದ ನೂರಾರು ಸಾರ್ವಜನಿಕರು ಆಗಮಿಸಿ ಘಟನೆಗೆ ಮೇಲಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಶಪಿಸುತ್ತಿದ್ದರು. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.