ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೋಟ್ಯಂತರ ನುಂಗಣ್ಣ ಇಇ ಮಂಜುನಾಥ್ ಜೈಲಿಗಟ್ಟಿ

Rashmi Kasaragodu
Updated On : 13 May 2013, 12:17 pm

ಕ.ಪ್ರ. ವಾರ್ತೆ   ತುಮಕೂರು   ಮೇ 12
ತುಮಕೂರು ನಗರಸಭೆ ಎಕ್ಸಿಕ್ಯುಟಿವ್ ಎಂಜಿನಿಯರ್ ಮಂಜುನಾಥ್ ಅಲಿಯಾಸ್ ಮೊಬೈಲ್ ಮಂಜುನಾಥ್ ಅವರನ್ನು ಕೂಡಲೇ ಜೈಲಿಗಟ್ಟುವಂತೆ ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಮುಂಬರುವ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಇ ಮಂಜುನಾಥ್ ಭ್ರಷ್ಟಾತಿಭ್ರಷ್ಟ. ಈತ ಕಾಯಿದೆ-ಕಾನೂನುಗಳನ್ನು ತಿರುಚಿ ಶಾಸಕರ ತಾಳಕ್ಕೆ ಕುಣಿದು ಹಣ ದರುಪಯೋಗಕ್ಕೆ ಕಾರಣನಾಗಿದ್ದಾನೆ. ಈತನಿಗೆ ತುಮಕೂರು ನಗರಸಭೆಯಲ್ಲಿ ಹುದ್ದೆಯಿಲ್ಲ. ಆದರೂ ಹುದ್ದೆ ನಿರ್ಮಾಣ ಮಾಡಿ ತಂದು ಕೂರಿಸಲಾಗಿದೆ. ಇದು ಕಳೆದ ಬಿಜೆಪಿ ಸರ್ಕಾರದ ಕೊಡುಗೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಕೂಡಲೇ ಈತನ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
21 ಕೋಟಿ ಅನುದಾನ ದುರಪಯೋಗ: ತುಮಕೂರು ನಗರಸಭೆಗೆ ಬಂದಿದ್ದ 21 ಕೋಟಿ ವಿಶೇಷ ಅನುದಾನವನ್ನು ಇಇ ಮಂಜುನಾಥ್ ದುರುಪಯೋಗಪಡಿಸಿಕೊಂಡಿದ್ದಾರೆ. ಬೇಕಾಬಿಟ್ಟಿ ಖರ್ಚು ಮಾಡಿ, ಕಾನೂನನ್ನು ಗಾಳಿಗೆ ತೂರಿದ್ದಾರೆ. ಒಂದು ಬಾರಿ ನಿರ್ಮಿಸಿದ ರಸ್ತೆಯ ಮೇಲೆ ಮತ್ತೆ ರಸ್ತೆ ನಿರ್ಮಿಸಿ, ಸುಳ್ಳು ಮಾಹಿತಿ ನೀಡಿ, ಹಣ ಗುಳುಂ ಮಾಡಿದ್ದಾರೆ. ತಮ್ಮ ಗಾಂಧಿನಗರದ ಕಚೇರಿ ಎದುರಿನ ಕಾಂಕ್ರಿಟ್ ರಸ್ತೆ ನಗರಸಭೆ ಅವ್ಯವಹಾರಕ್ಕೆ ಉತ್ತಮ ಉದಾಹರಣೆ. ರಸ್ತೆ ನಿರ್ಮಿಸಿದ ಮೇಲೆ ಗುಣಮಟ್ಟ ಚೆಕ್ ಮಾಡುವುವರಾಗಲೀ, ಪರಿಣತರಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಹಾಗೂ ಅಂದಿನ ಇನ್ನಿಬ್ಬರು ಜಿಲ್ಲೆಯ ಬಿಜೆಪಿ ಶಾಸಕರ ಕುಮ್ಮಕ್ಕಿನಿಂದಾಗಿ ಮಂಜುನಾಥ್ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಸೊಗಡು ಶಿವಣ್ಣನವರ ಕೈವಾಡದಿಂದಾಗಿ ತುಮಕೂರು ನಗರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
4 ಕೋಟಿ ಗುಳುಂ: ಇದೇ ಇಇ ಮಂಜುನಾಥ್ ತುಮಕೂರು ಜಿಲ್ಲಾ ಲೋಕೋಪಯೋಗಿ ಇಲಾಖೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಆಗ ಸುಮಾರು 4 ಕೋಟಿ ರು. ಹಣವನ್ನು ಜಿಲ್ಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಬಳಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಆದರೆ ಜಿಲ್ಲೆಯಲ್ಲಿ ಒಂದೇ ಒಂದು ರಸ್ತೆ ಗುಂಡಿ ಮುಚ್ಚಿದ ಉದಾಹರಣೆ ತೋರುವಲ್ಲಿ ವಿಫಲರಾಗಿದ್ದರು. ಈ ಕುರಿತು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿ, ಈ ಅಧಿಕಾರಿ ವಿರುದ್ದ ಕ್ರಮಕ್ಕೆ ಜಿಲ್ಲೆಯ ವಿವಿಧ ಶಾಸಕರು ಸೇರಿದಂತೆ ತಾವು ಆಗ್ರಹಿಸಿದ್ದೆವು. ಅಂದಿನ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿಯವರ ಗಮನಕ್ಕೂ ಈ ವಿಷಯ ಬಂದಿತ್ತು. ತನಿಖೆಯ ಭರವಸೆ ನೀಡಿದ್ದರು. ಆದರೆ ತನಿಖೆ ಹಳ್ಳ ಹಿಡಿಯಿತು. ತುಮಕೂರು ನಗರಸಭೆಗೆ ಹುದ್ದೆಯಿಲ್ಲದಿದ್ದರೂ ಕೋಟ್ಯಂತರ ರು. ವಿಶೇಷ ಅನುದಾನ ಖರ್ಚು ಮಾಡುವ ಹಿನ್ನೆಲೆಯಲ್ಲಿ ತಂದು ಕೂರಿಸಲಾಯಿತು ಎಂದು ಜಿಎಸ್‌ಬಿ ವಿಷಾದಿಸಿದರು.
ಅವೈಜ್ಞಾನಿಕ ಕಾಮಗಾರಿ: ತುಮಕೂರು ನಗರದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿಗಳು ನಡೆದಿವೆ. ರೇಲ್ವೆ ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಾಣ, ಅಮಾನಿಕೆರೆ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳು ಬೇಕಾಬಿಟ್ಟಿಯಾಗಿ ನಡೆದಿವೆ. ಅಮಾನಿಕೆರೆ ಕಾಮಗಾರಿಯಲ್ಲಂತೂ ಹಣ ಬೇಕಾದಷ್ಟು ದುರುಪಯೋಗವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement