ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಲೂಕು ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ನಾನಾ ದಾಖಲೆಗಳು ಸಂಪೂರ್ಣ ಭಸ್ಮ

Rashmi Kasaragodu
Updated On : 13 May 2013, 12:19 pm

ಹೊಳೆನರಸೀಪುರ: ತಾಲೂಕು ಕಚೇರಿಯ ಕಂಪ್ಯೂಟರ್ ಕೊಠಡಿಗೆ ಬೆಂಕಿ ಬಿದ್ದು ಮಹತ್ವದ ದಾಖಲೆಗಳು ಸುಟ್ಟು ಕರಕಲಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ ತಾಲೂಕು ಕಚೇರಿಯ ಕಂಪ್ಯೂಟರ್ ಕೊಠಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೊಠಡಿಯಲ್ಲಿದ್ದ ದಾಖಲೆ ಪತ್ರಗಳು ಮತ್ತು ಕಂಪ್ಯೂಟರ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ತಾಲೂಕು ಕಚೇರಿ ಸಮೀಪದಲ್ಲಿರುವ ಪಾಲಿಕೆಯ ಕಲ್ಯಾಣ ಮಂಟಪಕ್ಕೆ ಬಂದಿದ್ದ ಯುವಕನೊಬ್ಬ ತಾಲೂಕು ಕಚೇರಿ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊರಬರುತ್ತಿದ್ದ ಗಾಢ ಹೊಗೆಯನ್ನು ಕಂಡು ತಕ್ಷಣ ಹತ್ತಿರದ ಪೋಲಿಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾನೆ.
 ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದರಿಂದ ತುರ್ತಾಗಿ ಸ್ಥಳಕ್ಕೆ ಬಂದ ಆಗ್ನಿಶಾಮಕ ದಳದವರು ಬೆಂಕಿಯನ್ನು ಪಕ್ಕದ ಕೊಠಡಿಗಳಿಗೆ ಹರಡದಂತೆ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದಾರೆ. ಕೊಠಡಿಯಲ್ಲಿನ ಎಲ್ಲ ಸಾಮಾಗ್ರಿಗಳು ಬೆಂಕಿಗೆ ಅಹುತಿಯಾಗಿವೆ. ಕೊಠಡಿಯಲ್ಲಿ ಚುನಾವಣೆ ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಸೇರಿ ಇತರೇ ದಾಖಲೆಗಳು ಬೆಂಕಿಗೆ ಸಿಲುಕಿ ಬೂದಿಯಾಗಿದೆ.
ಭಾನುವಾರವಾಗಿದ್ದರಿಂದ ಕಚೇರಿಯಲ್ಲಿ ಸಿಬ್ಬಂದಿ ಯಾರೂ ಇರಲಿಲ್ಲ. ಘಟನೆ ನಂತರ ಸ್ಥಳಕ್ಕೆ ಆಗಮಿಸಬೇಕಿದ್ದ ಅಧಿಕಾರಿಗಳೂ  ಬರಲಿಲ್ಲ. ಕಾರಣ ತಹಸೀಲ್ದಾರ್ ಮಂಜುಳ ಭಾನುವಾರ ಪ್ರಯುಕ್ತ ಮೈಸೂರಿಗೆ ತೆರಳಿದ್ದರು. ತಹಸೀಲ್ದಾರ್ ಗ್ರೇಡ್ ಅಧಿಕಾರಿ ಪ್ರಸನ್ನಮೂರ್ತಿ ಕೆ.ಆರ್.ನಗರಕ್ಕೆ ತೆರಳಿದ್ದರಿಂದ ಘಟನಾ ಸ್ಥಳಕ್ಕೆ ಬರಲಾಗಲಿಲ್ಲ. ಕಂದಾಯ ಇಲಾಖೆ ಇತರೆ ಅಧಿಕಾರಿಗಳು ಹಾಗೂ ನೌಕರರು ಘಟನೆ ನಡೆದ ಬಹು ಹೊತ್ತಿನ ನಂತರ ಆಗಮಿಸಿದರು.
ಬೆಂಕಿ ಅವಘಡಕ್ಕೆ ಕಚೇರಿಯಲ್ಲಿ ವಿದ್ಯುತ್‌ಶಾರ್ಟ್ ಸರ್ಕ್ಯೂಟ್‌ನಿಂದ ಆಗಿರಬಹುದೆಂದು ಶಂಕಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಗೋಪಾಲನಾಯಕ್, ಪಿಎಸ್‌ಐ ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬೆಂಕಿ ಘಟನೆ ನಂತರ ದಾಖಲೆ ಪತ್ರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು.
ಬೆಂಕಿಗೆ ಆಹುತಿಯಾದ ಮಹತ್ವದ ದಾಖಲೆಗಳು ಯಾವುವು ಎಂಬುದರ ಬಗ್ಗೆ ಅಧಿಕಾರಿಗಳು  ಸ್ಪಷ್ಟನೆ ನೀಡಿಲ್ಲ. ಆದರೆ ಈಚೆಗೆ ನಡೆದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ದಾಖಲೆಗಳು ಪೂರ್ಣ ಸುಟ್ಟು ಹೋಗಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ವಿಧಾನಸಭೆ ಚುನಾವಣೆಯಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಮಂದಿ ಮತದಾರರ ಸೇರ್ಪಡೆ ನಡೆದಿತ್ತು. ಈ ಸೇರ್ಪಡೆಯಲ್ಲಿ ಬಹಳಷ್ಟು ನ್ಯೂತನತೆಗಳು ಇದ್ದವೆಂಬ ದೂರುಗಳು ಸಹ ಇದ್ದವು. ಈ ಬೆಂಕಿ ಅವಘಡ ಅಕಸ್ಮಿಕವೆ ಅಥವಾ ಪೂರ್ವಯೋಜಿತವೆ ಎಂಬ ಬಗ್ಗೆ ತನಿಖೆಯಿಂದ ಮಾತ್ರ ಬಯಲಾಗಬೇಕಿದೆ.


ಸಿದ್ದರಾಮಯ್ಯಗೆಅಭಿನಂದಿಸಲು ಕಾರ್ಯಕರ್ತರ ಸಿದ್ಧತೆ
ಅರಸೀಕೆರೆ: ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಮೇ.13ರಂದು ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯರಿಗೆ ಅಭಿನಂದಿಸಿ ಶುಭ ಹಾರೈಸಲು ಅರಸೀಕೆರೆ ತಾಲೂಕಿನಿಂದ ನಾನಾ ಸಂಘಟನೆಗಳಿಂದ ಸಹಸ್ರಾರು ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ತೆರಳಲು ಈಗಾಗಲೇ ಸಿದ್ದತೆ ನಡೆದಿದ್ದಾರೆ. ಅಂದು ಬೆಳಿಗ್ಗೆ 7 ಕ್ಕೆ ಅರಸೀಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ವಾಹನಗಳು ಹಾಗೂ ರೈಲುಗಳಲ್ಲಿ ವ್ಯವಸೆ ಕಲ್ಪಿಸಲಾಗುತ್ತಿದೆ ಎಂದು ಸಿದ್ದರಾಮಯ್ಯನವರ ಅಭಿಮಾನಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement