ನನ್ನದು ಪ್ರವಾಹದೆದುರು'ಹನಿ' ಹೋರಾಟ: ನಿಂಗಪ್ಪ
ತುಮಕೂರು: ಪ್ರವಾಹದ ಮುಂದೆ ಹನಿ ನೀರಾವರಿ ಹೋರಾಟ ಮಾಡಿದಂತಾಯಿತು ಎಂದು ತುಮಕೂರು ಗ್ರಾಮಾಂತರ ಪರಾಜಿತ ಅಭ್ಯರ್ಥಿ ಎಚ್. ನಿಂಗಪ್ಪ ತಮ್ಮ ಸೋಲಿನ ಕುರಿತು ವ್ಯಾಖ್ಯಾನಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಬ್ಬರೂ ಹಣವನ್ನು ಪ್ರವಾಹದಂತೆ ಖರ್ಚು ಮಾಡಿದರು. ತಮ್ಮದು ಹನಿ ನೀರಾವರಿ ರೀತಿ ಖರ್ಚು. ಇತಿಮಿತಿಗೊಳಪಟ್ಟಿದ್ದು. ಹೀಗಾಗಿ ಒಳ್ಳೆಯತನ ಹಣ ಎಂಬ ಪ್ರವಾಹದ ಮುಂದೆ ಕೊಚ್ಚಿ ಹೋಯಿತು ಎಂದು ತಮ್ಮ ಸೋಲಿನ ಕುರಿತು ವಿಶ್ಲೇಷಿಸಿದರು.
ಪ್ರಚಾರದ ವೇಳೆ ಸುರೇಶ್ಗೌಡ ಹಾಗೂ ಗೌರಿಶಂಕರ್ ದೂರದಿಂದಲೇ ತಮ್ಮನ್ನು ನೋಡಿ ಕೈ ಬೀಸಿದರು. ಇದನ್ನು ನೋಡಿದ ವಿರೋಧಿಗಳು ನಿಂಗಪ್ಪ, ಸುರೇಶ್ಗೌಡ ಹಾಗೂ ಗೌರಿಶಂಕರ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಅದೂ ಕೋಟಿ ಲೆಕ್ಕದಲ್ಲಿ. ಆದರೆ ತಾವು ಇದ್ಯಾವುದಕ್ಕೂ ತಲೆಕಡಿಸಿಕೊಳ್ಳದೆ ಪ್ರಚಾರ ಕೈಗೊಂಡಿದ್ದಾಗಿ ತಿಳಿಸಿದರು.
ಸುರೇಶ್ಗೌಡರಿಗೆ ಮನವಿ: ತಮ್ಮ ಕಾಲದ ಏತ ನೀರಾವರಿಯನ್ನು ವಿಕೃತಗೊಳಿಲಾಗಿದೆ. ಇದನ್ನು ಸರಿಪಡಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ವಿನಾ ಕಾರಣ ಟೀಕೆ ಟಿಪ್ಪಣಿ ಮಾಡುವ ವ್ಯಕ್ತಿ ತಾವಲ್ಲ. ಸುರೇಶ್ಗೌಡರನ್ನು ಜನತೆ ಆರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ನಿಂಗಪ್ಪ ತಿಳಿಸಿದರು. ತಮ್ಮನ್ನು ಬೆಂಬಲಿಸಿದ ಮತದಾರರು, ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನಿಂಗಪ್ಪ ತಿಳಿಸಿದರು.
ಜಿಲ್ಲಾ ಕೆಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಕೊಪ್ಪಲ್ನಾಗರಾಜ್, ಸಂಸದ ಬಸವರಾಜ್ ಇದ್ದರು.