ನಾಗರಾಜಯ್ಯರಿಂದ ಕುಣಿಗಲ್ ಅಭಿವೃದ್ಧಿ ಎಷ್ಟಾದೀತು..?
ಕುಣಿಗಲ್: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಗೆಲವು ಸಾಧಿಸಿದ್ದು, ನೂತನ ಶಾಸಕರು ತಾಲೂಕಿನ ಹಲವು ಜ್ವಲಂತ ಸಮಸ್ಯೆಗಳನ್ನು, ತಮ್ಮ ನಾಲ್ಕು ದಶಕಗಳ ಅನುಭವದಿಂದ ನಿಭಾಯಿಸಿ, ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆಯೇ ಎಂಬ ಕಾತುರತೆ ತಾಲೂಕಿನ ಜನತೆಯಲ್ಲಿ ಮನೆ ಮಾಡಿದೆ.
ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡನೆ ಮುನ್ನ ಹುಲಿಯೂರುದುರ್ಗ, ಕುಣಿಗಲ್ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿದ್ದವು. ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರದಿಂದ ಮೂರುಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿ ಅಧಿಕಾರ ನಡೆಸಿ, ಕಳೆದ ನಲವತ್ತು ವರ್ಷಗಳ ಕಾಲ, ಅಪಾರ ಅನುಭವ ಹೊಂದಿರುವ ಮಾಜಿಸಚಿವ ಡಿ.ನಾಗರಾಜಯ್ಯ, ಚುನಾವಣಾ ಸಮಯದಲ್ಲಿ ಆದ ಹಲವು ರಾಜಕೀಯ ಏರುಪೇರುಗಳ ನಡುವೆ, ಸಿಕ್ಕ ಸ್ವಲ್ಪ ದಿನಗಳ ಅವಧಿಯಲ್ಲೆ ಕ್ಷೇತ್ರದಾದ್ಯಂತ ಸಂಚರಿಸಿ, ಸಮರ್ಥವಾಗಿ ಚುನಾವಣೆ ಎದುರಿಸಿ, ಪ್ರಸಕ್ತ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಹುಲಿಯೂರುದುರ್ಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಮಾಜಿ ಸಚಿವರು, 2008ರಲ್ಲಿ ಕ್ಷೇತ್ರ ವಿಂಗಡನೆಯಾದ ಸಮಯದಲ್ಲೆ ಕುಣಿಗಲ್ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸ್ಪರ್ಧಿಸಿ, ಪರಾಭವಗೊಂಡು, 2013ರಲ್ಲಿ ವಿಜಯಮಾಲೆ ಅಲಂಕರಿಸಿದ್ದಾರೆ. ರಾಜಕೀಯ, ಆಡಳಿತ ಎಲ್ಲಾ ಮಜಲುಗಳ ಅನುಭವ ಹೊಂದಿರುವ ಡಿ.ನಾಗರಾಜಯ್ಯ, ತಾಲೂಕಿನಲ್ಲಿ ಕಾಡುತ್ತಿರುವ ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ, ಎಷ್ಟರ ಮಟ್ಟಿಗೆ ಸ್ಪಂದಿಸಿ, ಬಗೆಹರಿಸಿ ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆಂಬ ತಾಲೂಕಿನ ಜನತೆಯಲ್ಲಿ ಕುತೂಹಲ ಕೆರಳಿಸಿದೆ.
ಬಹುತೇಕ ಗ್ರಾಮಪಂಚಾಯಿತಿ ಸೇರಿದಂತೆ ತಾಲೂಕು ಪಂಚಾಯಿತಿ, ಆರು ಜಿಪಂ ಕ್ಷೇತ್ರಗಳ ಪೈಕಿ ಐದರಲ್ಲಿ ಅಧಿಕಾರ ಇರುವ ತಮ್ಮದೇ ಪಕ್ಷದ ಜನಪ್ರತಿನಿಧಿಗಳ ಸಹಕಾರದಿಂದ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುವುದರ ಜತೆಯಲ್ಲಿ, ಪ್ರತಿಬಾರಿ ಹೇಮಾವತಿ ನೀರು ತಾಲೂಕಿಗೆ ಹರಿಸಲು ಪರದಾಡುವ ಸ್ಥಿತಿ ಇದ್ದು ಇದಕ್ಕೆ ಶಾಶ್ವತ ಪರಿಹಾರ, ಹುಲಿಯೂರುದುರ್ಗದ ದೀಪಾಂಬುದಿಕೆರೆವರೆಗಿನ ನಾಲಾ ಕಾಮಗಾರಿ, ಮಾರ್ಕೋನಹಳ್ಳಿ ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರನ್ನು ಮಂಗಳಾ ಜಲಾಶಯಕ್ಕೆ ಹರಿಸುವ ನಾಲಾ ಕಾಮಗಾರಿ, ಕಳೆದ ಹಲವು ದಶಕಗಳಿಂದ ಕಗ್ಗಂಟಾಗಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಉಳುಮೆಚೀಟಿ ವಿತರಣೆ, ಅಭಿವೃದ್ದಿಯಲ್ಲಿ ಹಿಂದುಳಿದಿರುವ ಹುಲಿಯೂರುದುರ್ಗ, ಅಮೃತೂರುಗಳ ಸಮಗ್ರ ಅಭಿವೃದ್ಧಿ, ತಾಲೂಕಿನಲ್ಲಿನ ಕೈಗಾರಿಕೆ ಅಭಿವೃದ್ಧಿ ಸೇರಿದಂತೆ ಪ್ರಮುಖವಾಗಿ ಪಟ್ಟಣದಲ್ಲಿ ಪುರಸಭೆ ಆಡಳಿತ ಜೆಡಿಎಸ್ ವಶದಲ್ಲೆ ಇದ್ದು, ಹೃದಯಭಾಗದಲ್ಲಿ ಹಾದುಹೋಗಿರುವ ಹಳೇ ರಾಹೆ 48 ರಸ್ತೆ ಅಭಿವೃದ್ಧಿಗೊಳಿಸಿ ಚತುಷ್ಪಥರಸ್ತೆಯನ್ನಾಗಿಸಿ, ಕಳೆದೊಂದು ದಶಕಗಳಿಂದಲೂ ಕುಂಟುತ್ತಾ ಸಾಗಿರುವ ಪುರಸಭೆ ಬಸ್‌ನಿಲ್ದಾಣ ಕಾಮಗಾರಿಗೆ ಚಾಲನೆ, ಸಂತೇಮೈದಾನ ಮಳಿಗೆಗಳ ವಿಲೆವಾರಿ, ಲಗಾಮು ಮೀರಿರುವ ಪುರಸಭೆ ಆಡಳಿತಕ್ಕೆ ಲಗಾಮು ಹಾಕಲು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವರೋ ಎಂದು ಪಟ್ಟಣ ಸೇರಿದಂತೆ ತಾಲೂಕಿನ ಜನತೆ ಬಹುವಾಗಿ ನಿರೀಕ್ಷೆ ಇಟ್ಟಿದ್ದಾರೆ. ಶಾಸಕರು ಎಷ್ಟರ ಮಟ್ಟಿಗೆ ಜನತೆಯ ನಿರೀಕ್ಷೆಗೆ ಸ್ಪಂದಿಸಿ ಕಾರ್ಯನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.