ಭಾರೀ ಗಾಳಿ, ಮಳೆಗೆ ವಿದ್ಯುತ್ ಕಂಬ ಧರೆಗೆ
ಕ.ಪ್ರ.ವಾರ್ತೆ ಆಲೂರು ಮೇ 12
ಶನಿವಾರ ಸುರಿದ ಗಾಳಿ ಸಹಿತ ಭಾರಿ ಮಳೆಯಿಂದಾಗಿ ತಾಲೂಕಿನ ಕದಾಳು, ಕಬ್ಬಿನಹಳ್ಳಿ, ಹಂಪನಕುಪ್ಪೆ ಗ್ರಾಮಗಳಲ್ಲಿ ಸುಮಾರು 25 ರಿಂದ 30 ಮನೆಗಳ ಐದಾರು ಸಾವಿರ ಹೆಂಚುಗಳು ಹಾಗೂ 300 ಸಿಮೆಂಟ್ ಶೀಟ್‌ಗಳು ಹಾರಿಹೋಗಿವೆ.
ಕದಾಳು ಗ್ರಾಮದ ರಮೇಶ್ ಎಂಬುವರಿಗೆ ಸೇರಿದ 30 ಸಾವಿರ ಬೆಲೆಯ ಸಿಂಧಿ ಹಸು ಸಿಡಿಲು ಬಡಿದು ಸಾವನ್ನಪ್ಪಿದೆ. ಇದೇ ಗ್ರಾಮದ ಗಂಗೇಗೌಡ ಎಂಬುವವರ ಬಾಳೆ ತೋಟದಲ್ಲಿ ಕಟಾವಿಗೆ ಸಿದ್ದವಿದ್ದ ಸುಮಾರು 400 ಬಾಳೆ ಗಿಡಗಳು ಭಾರಿ ಗಾಳಿಯಿಂದಾಗಿ ನೆಲಕಚ್ಚಿವೆ. ಮರಸು ಗ್ರಾಮದಲ್ಲೂ ಅನೇಕ ಮನೆಗಳು ಜಖಂಗೊಂಡಿವೆ.
ನೀಲಗಿರಿ, ಹಲಸಿನ ಗಿಡಗಳು ಸೇರಿ ಲೆಕ್ಕವಿಲ್ಲದಷ್ಟು ಅನೇಕ ಜಾತಿಯ ಮರಗಳು ರಭಸದ ಗಾಳಿಗೆ ಮುರಿದು ಬಿದ್ದಿವೆ. ಇದರಿಂದ ಲಕ್ಷಾಂತರ ರು. ಹಾನಿಯಾಗಿದೆ. ಸುಮಾರು 15 ರಿಂದ 20 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದು ವಾತಾವರಣವಿದ್ದು ಈಗಲೋ ಆಗಲೋ ಮಳೆ ಸುರಿಯುವಂತಿದೆ. ಶನಿವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಭೀತರಾಗಿದ್ದ ಜನ ಮನೆಯ ಹೆಂಚುಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿದ್ದರು.
ರಮೇಶ್‌ಕುಮಾರ್‌ಗೆ ನೀರಾವರಿ ಖಾತೆ ನೀಡಿ
ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಭಾರಿ ನೀರಾವರಿ ಖಾತೆಯನ್ನು ನೀಡಬೇಕೆಂದು ಶ್ರೀನಿವಾಸಪುರ ರೈತ ಸಂಘವು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಬರಪೀಡಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿದ್ದು ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕೆ.ಆರ್.ರಮೇಶ್ ಕುಮಾರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಒದಗಿಸಲು ತಾನು ಬದ್ಧ ಎಂದು ತಿಳಿಸಿರುವುದನ್ನು ನೆನಪು ಮಾಡಿರುವ ಶ್ರೀನಿವಾಸಪುರ ತಾಲೂಕು ರೈತ ಸಂಘದ ಮುಖಂಡರು ರಮೇಶ್‌ಕುಮಾರ್ ಅವರಿಗೆ ನೀರಾವರಿ ಮಂತ್ರಿ ಸ್ಥಾನ ನೀಡಿದಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.