ಸಿದ್ದು ಸಿಎಂಗಿರಿಗೆ ವಿರೋಧ ಖಂಡನಾರ್ಹ
ತುಮಕೂರು: ಅಹಿಂದ ಚಳವಳಿ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವುದಕ್ಕೆ ಕೆಲವರು ದಲಿತ ಸಂಘಟನೆ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಚೇಳೂರು ವೆಂಕಟೇಶ್ ಹಾಗೂ ಜಿಲ್ಲಾಧ್ಯಕ್ಷ ಎಂ.ವಿ. ಕೃಷ್ಣಪ್ಪ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದಲ್ಲಿ ಒಳಮೀಸಲಾತಿ ಹೋರಾಟಗಾರರಿಗೆ ಪೊಲೀಸರು ಹಿಗ್ಗಾಮುಗ್ಗಾ ಬಡಿದಾಗ ದಲಿತಪರ ದ್ವನಿ ಎತ್ತಿದ ಮೊದಲ ವ್ಯಕ್ತಿ ಸಿದ್ದರಾಮಯ್ಯ ಎಂಬುದನ್ನು ಯಾರೂ ಮರೆಯುವಂತಿಲ್ಲ. ಆದರೆ ನಮ್ಮ ಕರಳುಬಳ್ಳಿಗಳಾದ ದಲಿತ ಶಾಸಕರು ಧ್ವನಿ ಎತ್ತಲಿಲ್ಲ. ಪ್ರಗತಿಪರ ಸಿದ್ದರಾಮಯ್ಯನವರಿಗಿಂತ ದಲಿತರ ಪರ ವ್ಯಕ್ತಿ ಬೇಕೆ? ದಲಿತ ವಿರೋಧಿಗಳು ದಲಿತರೇ ಆಗಿದ್ದರೂ ವಿರೋಧಿಸಬೇಕು. ಆದ್ದರಿಂದ ದಲಿತ ಪರ ವ್ಯಕ್ತಿಗಳನ್ನು ಟೀಕಿಸುವುದು ಅನಾಗರಿಕತೆಯಾಗುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯನವರನ್ನು ಸೋಲಿಸಲು ಪಣತೊಟ್ಟು ವಿಫಲರಾದ ಕೆಲ ಸಂಘಟನೆಗಳೇ ಈ ಕೃತ್ಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕರ್ನಾಟಕದಲ್ಲಿ ದಲಿತರಲ್ಲಿಯೇ ಅತಿ ಹೆಚ್ಚು ಸಂಖ್ಯೆಯುಳ್ಳ ಮಾದಿಗ ಜನಾಂಗವನ್ನು ಕಾಂಗ್ರೆಸ್ನಿಂದ ಹೊರದಬ್ಬಿ ಹೈಕಮಾಂಡ್ ನಿರ್ಲಕ್ಷಿಸುವಂತೆ ಮಾಡಿದ್ದವು. ಆದರೆ ಸಿದ್ದರಾಮಯ್ಯನವರ ಕಾರಣಕ್ಕಾಗಿ ಈ ಬಾರಿ ಮಾದಿಗ ಸಮುದಾಯ ಕಾಂಗ್ರೆಸ್ ಅನ್ನು ಕೈಹಿಡಿದು ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.
ಆದ್ದರಿಂದ ಮಾದಿಗ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಕೆಲವು ಪ್ರಭಾವಿ ದಲಿತ ನಾಯಕರ ಪಿತೂರಿಯಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾದ ಕಾಂಗ್ರೆಸ್ ವಕ್ತಾರರಾದ ಡಾ. ಎಲ್. ಹನುಮಂತಯ್ಯ, ಸಿದ್ದರಾಮಯ್ಯನವರ ಆತ್ಮೀಯ, ಮೈಸೂರು ಭಾಗದ ಪ್ರಭಾವಿ ಮಾದಿಗ ಜನಾಂಗದ ನಾಯಕ ಹೆಚ್. ಗೋವಿಂದಯ್ಯ ಹಾಗೂ ಕಾಂಗ್ರೆಸ್ನಲ್ಲಿ ಗೆದ್ದಿರುವ 3 ಜನರಲ್ಲಿ ಇಬ್ಬರು ಸೇರಿದಂತೆ 4 ಮಂದಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.