ಸಿದ್ದುಗೆ ಸಿದ್ಧಗಂಗಾ ಶ್ರೀ ಅಭಿನಂದನೆ
ತುಮಕೂರು: ಮುಖ್ಯಮಂತ್ರಿಯಾಗಿ ನಿಯೋಜಿತಗೊಂಡಿರುವ ಸಿದ್ದರಾಮಯ್ಯ ಅವರನ್ನು ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅಭಿನಂದಿಸಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದನ್ನು ತಿಳಿದು ತುಂಬಾ ಸಂತೋಷವಾಯಿತು. ರಾಜಕೀಯ ಕ್ಷೇತ್ರದಲ್ಲಿ ನೀವು ಮಾಡುತ್ತಾ ಬಂದಿರುವ ನಿಸ್ವಾರ್ಥ, ಪ್ರಾಮಾಣಿಕ ಸೇವೆಗೆ ಸಂದ ಅವಕಾಶವಿದು ಎಂದು ಶ್ರೀಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೇರ ನುಡಿ, ಸದ್ಭಾವದ ದೂರದೃಷ್ಟಿ, ಸರ್ವಜನಾಂಗದ ದೃಷ್ಟಿ ಇರುವುದು ಶ್ಲಾಘನೀಯ. ಈಗಾಗಲೇ ಕರ್ನಾಟಕದ ರಾಜಕೀಯದಲ್ಲಿ ಅತ್ಯುತ್ತಮ ಕೀರ್ತಿ ಪಡೆದಿರುವ, ಸಚಿವರಾಗಿ ಏಳು ಬಾರಿ ಸಮರ್ಥ ಬಜೆಟ್ ಮಂಡಿಸಿರುವ ನಿಮಗೆ ಕರ್ನಾಟಕವನ್ನು ಹೇಗೆ ಮುಂದೊಯ್ಯಬೇಕು ಎಂಬ ದೂರದೃಷ್ಟಿ ಇದೆ ಎಂಬುದನ್ನು ನಾವು ಅರಿತಿದ್ದೇವೆ ಎಂದು ತಿಳಿಸಿದ್ದಾರೆ. ದೀನ ದಲಿತರ, ಅಲ್ಪಸಂಖ್ಯಾತರ, ಅನಾಥರ, ಅಸಹಾಯಕರ ಆಪತ್ ಬಾಂಧವರಾಗಿ ರಾಜ್ಯದ ಸರ್ವ ಜನಾಂಗದ ಏಳಿಗೆಗೆ ಶ್ರಮಿಸುತ್ತೀರಿ ಎಂದು ಭಾವಿಸಿರುವುದಾಗಿಯೂ ಶ್ರೀಗಳು ಹೇಳಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕ ರಾಷ್ಟ್ರದ ಒಂದನೇ ರಾಜ್ಯವಾಗಿ ಮುಂದುವರೆಯಲಿ ಎಂಬ ಆಶಾಭಾವನೆ ನಮ್ಮದಾಗಿದೆ. ಪರಮಾತ್ಮ ನಿಮಗೆ ಆಯುರಾರೋಗ್ಯಾದಿ ಸಕಲ ಸನ್ಮಂಗಳ ಅನುಗ್ರಹಿಸಲೆಂದು ಶ್ರೀಗಳು ಹಾರೈಸಿದ್ದಾರೆ.