ಸೊಗಡು ಕುತಂತ್ರದಿಂದ ಬಿಜೆಪಿಗೆ ಸೋಲು
ಕ.ಪ್ರ. ವಾರ್ತೆ ತುಮಕೂರು ಮೇ 12
ಮತದಾರರ ಪಟ್ಟಿ ಲೋಪದಿಂದಾಗಿ ತುಮಕೂರು ನಗರದಲ್ಲಿ ಕೆಜೆಪಿಗೆ ಸೋಲಾಗಿದೆ. ಮಾಜಿ ಸಚಿವ ಸೊಗಡು ಶಿವಣ್ಣನವರ ಈ ಕುತಂತ್ರಕ್ಕೆ 3 ಮಂದಿ ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಸಂಸದ ಜಿ.ಎಸ್. ಬಸವರಾಜ್ ಆರೋಪಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಹಾಗೂ ತುಮಕೂರು ನಗರ ಬಿಜೆಪಿ ಅಭ್ಯರ್ಥಿಯಾಗಿದ್ದ ಸೊಗಡು ಶಿವಣ್ಣನವರ ಕುತಂತ್ರಕ್ಕೆ ಚುನಾವಣಾಧಿಕಾರಿಗಳು, ವಿಶೇಷವಾಗಿ ಶಿರಸ್ತೇದಾರ್ ಸೇರಿದಂತೆ ಮೂರು ಮಂದಿ ಅಧಿಕಾರಿಗಳು ಸಹಕರಿಸಿದರು. ಕೆಜೆಪಿ ಮತದಾರರು ಇರುವ ಕಡೆ ಅವರ ಪಟ್ಟಿಯನ್ನೇ ಇಲ್ಲದಂತೆ ಮಾಡಿದರು. ಇದ್ದರೂ ಯಾವ ಬೂತ್‌ನಲ್ಲಿ ಮತದಾನ ಮಾಡಬೇಕು ಎಂಬುದರ ಕುರಿತು ಗೊಂದಲ ಸೃಷ್ಟಿಸಿದರು. ಒಟ್ಟಾರೆ ಕೆಜೆಪಿ ಮತದಾರರ ಪಟ್ಟಿ ಡಿಲೀಟ್ ಮಾಡಿ, ಕೆಜೆಪಿಗೆ ಸೋಲಾಗುವಂತೆ ಮಾಡಿದರು. ಇದಕ್ಕೆಲ್ಲಾ ನೇರ ಹೊಣೆ ಮಾಜಿ ಸಚಿವ ಸೊಗಡು ಶಿವಣ್ಣ. ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಈಗಾಗಲೇ ತನಿಖೆಗಾಗಿ ದೂರು ಸಲ್ಲಿಸಲಾಗಿದ್ದು, ಉತ್ತರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ಜಿಎಸ್‌ಬಿ ಸ್ಪಷ್ಟಪಡಿಸಿದರು.
ಸೊಗಡು ಶಿವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಿದರು. ಇದಕ್ಕೆ ಮತದಾರರ ಪಟ್ಟಿ ಡಿಲೀಟ್ ಮುಖ್ಯ ಉದಾಹರಣೆ. ತೋರಿಕೆಗೆ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದೆ ಎಂದು ಆರೋಪಿಸಲಾದ 100 ಮಂದಿಯಲ್ಲಿ 40 ಮಂದಿ ಹೆಸರನ್ನು ಚುನಾವಣಾಧಿಕಾರಿಗಳು ಸೇರಿಸಿದರು. 60 ಮಂದಿ ಹೆಸರನ್ನು ಬಿಟ್ಟರು. ಆ 40 ಮಂದಿ ಎಲ್ಲಿ ವೋಟು ಹಾಕಬೇಕು ಎಂಬುದರ ಕುರಿತು ಗೊಂದಲ ಸೃಷ್ಟಿಸಿದರು. ಒಟ್ಟಾರೆ 8 ರಿಂದ 10 ಸಾವಿರ ಮಂದಿ ಹೆಸರು ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಲೀಟ್ ಆಗುವಂತೆ 3 ಮಂದಿ ಭ್ರಷ್ಟ ಅಧಿಕಾರಿಗಳು ಸಹಕರಿಸಿದರು. ಕೆಜೆಪಿಗೆ ಸೋಲಾಗುವಂತೆ ನೋಡಿಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.
45 ಸ್ಥಾನ ನಿರೀಕ್ಷೆಯಲ್ಲಿದ್ದೆವು: ಕೆಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕೆಲ ಕಡೆ 2 ಮತ್ತೆ ಕೆಲ ಕಡೆ 3 ನೇ ಸ್ಥಾನ ದೊರಕಿದೆ. ನಗರದಲ್ಲಿ 2 ನೇ ಸ್ಥಾನ ಬಂದಿದೆ. ನಿರೀಕ್ಷೆಗೂ ಮೀರಿ ಮತದಾರರು ಕೆಜೆಪಿ ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಕೆಜೆಪಿ ಒಟ್ಟು 45 ಸ್ಥಾನ ಗಳಿಸಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಒಟ್ಟಾರೆ ಸಾಧನೆಯಾಗಿಲ್ಲ. ಆದರೆ ಮತ ಪಡೆದ ಪ್ರಮಾಣ ತೃಪ್ತಿಕರವಾಗಿದೆ. ಬಿಜೆಪಿಗೆ ಕೆಜೆಪಿಯಿಂದ ಹೊಡೆತ ಬಿದ್ದಿರುವುದಂತೂ ನಿಜ. ಕೆಜೆಪಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಜಿಎಸ್‌ಬಿ ತಿಳಿಸಿದರು.
ಅಶಾಂತಿಗೆ ಬಿಜೆಪಿಯೇ ಹೊಣೆ: ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರದಲ್ಲಿ ಪದೇ-ಪದೇ ಶಾಂತಿ ಕಾಪಾಡಿದ್ದು ತಮ್ಮ ಹೆಗ್ಗಳಿಕೆ ಎಂದು ಹೇಳಿಕೊಂಡು ಮತ ಪಡೆಯಲು ಪ್ರಯತ್ನಿಸಿದರು. ಆದರೆ ಗಲಾಟೆ ಮಾಡಿಸುತ್ತಿದ್ದವರು, ಅಶಾಂತಿಗೆ ಕಾರಣರಾಗಿದ್ದವರೇ ಬಿಜೆಪಿ ಮಂದಿ. ಗಲಾಟೆ ಮಾಡಿಸುವವರೇ ಸುಮ್ಮನಿದ್ದ ಮೇಲೆ ಶಾಂತಿ ನೆಲೆಸುವುದು ಸಹಜವಲ್ಲವೇ ಎಂದು ಜಿಎಸ್‌ಬಿ ಮಾರ್ಮಿಕವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ನಗರ ಘಟಕದ ಕೊಪ್ಪಳ್ ನಾಗರಾಜ್ ಸೇರಿದಂತೆ ಕೆಜೆಪಿ ಮುಖಂಡರು, ಇತರರು ಉಪಸ್ಥಿತರಿದ್ದರು.