'ಅಕ್ಷಯ' ಮೇನಿಯಾ; ತುಂಬಿದ ಚಿನ್ನದಂಗಡಿಗಳು
ಕುಣಿಗಲ್: ಅಕ್ಷಯ ತೃತೀಯ ಮೇನಿಯ ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೂ ಹಬ್ಬಿದ ಪರಿಣಾಮ ಸೋಮವಾರ ಪಟ್ಟಣದ ಚಿನ್ನದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕಿದವು.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ, ಚಿನ್ನ ಹೆಚ್ಚಾಗಿ ಒಳ್ಳೆಯದಾಗುತ್ತದೆಂಬ ಪುರಾಣಗಳ ಹೇಳಿಕೆ. ಸೋಮವಾರ ಪಟ್ಟಣದ ದೊಡ್ಡಪೇಟೆಯಲ್ಲಿನ ಹತ್ತಕ್ಕೂ ಹೆಚ್ಚು ಮಳಿಗೆಯಲ್ಲಿ ಬೆಳಗಿನಿಂದಲೇ ಹೆಚ್ಚಿನದಾಗಿ ಚಿನ್ನ, ಅಲ್ಪ ಪ್ರಮಾಣದ ಬೆಳ್ಳಿ ಖರೀದಿಗೆ ಮುಗಿಬಿದಿದ್ದು ಸಾಮಾನ್ಯ ದೃಶ್ಯವಾಗಿತ್ತು. ದುರಂತ ಎಂದರೆ ತಾಲೂಕಿನಲ್ಲಿ, ಸತತ ಎರಡನೇ ವರ್ಷವೂ ಬರಪೀಡಿತವಾಗಿದ್ದು, ಪಟ್ಟಣ ಪ್ರದೇಶದ ಜನರಿಗಿಂತ ಹೆಚ್ಚಿನದಾಗಿ ಗ್ರಾಮಾಂತರ ಪ್ರದೇಶದ ಜನತೆ, ಚಿನ್ನದಂಗಡಿಗಳ ಮುಂದೆ ಗಂಟೆಗಟ್ಟಲೆ ಕಾದು ಖರೀದಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ಮಧ್ಯಾಹ್ನದ ವೇಳೆಗೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವ ಬಗ್ಗೆ ಸುದ್ದಿ ಬರತೊಡಗಿದ ಕಾರಣ, ಪಟ್ಟಣ ಪ್ರದೇಶದ ಜನತೆ ಚಿನ್ನ ಖರೀದಿಗೆ ಆಸಕ್ತಿ ತೋರಿದರು.
ಪಟ್ಟಣದಲ್ಲಿನ ಹೆಚ್ಚಿನ ಚಿನ್ನದಂಗಡಿಗಳು ದೊಡ್ಡಪೇಟೆ ಮುಖ್ಯರಸ್ತೆಯಲ್ಲಿದ್ದು ಈ ಅಂಗಡಿಗಳ ಮಧ್ಯೆ ಜವಳಿ ಹಾಗೂ ಕಿರಾಣಿ ಮಳಿಗೆಗಳೂ ಇದ್ದು ಈ ಮಳಿಗೆಗಳಿಗೆ ಮಾತ್ರ ಅಕ್ಷಯ ತೃತೀಯ ಮೇನಿಯ ಸೋಮವಾರ ಕೆಲಸ ಮಾಡದ ಕಾರಣ ವರ್ತಕರು ಪೆಚ್ಚು ಮೋರೆ ಹಾಕಿ, ಅಕ್ಕಪಕ್ಕದ ಅಂಗಡಿಗಳ ಗಿರಾಕಿಗಳ ವಹಿವಾಟನ್ನು ಗಮನಿಸುತ್ತಾ ಕಾಲ ಕಳೆದರು.