ಡಿಸಿಎಂ ಅಥವಾ ಪ್ರಮುಖ ಖಾತೆ ನೀಡಿ
ಕೊರಟಗೆರೆ: ರಾಜ್ಯದಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿರುವ ಪಕ್ಷದ ದಲಿತ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ್ಗೆ ಡಿಸಿಎಂ ಹುದ್ದೆ ಅಥವಾ ಸಂಪುಟದಲ್ಲಿ ಪ್ರಮುಖ ಖಾತೆ ನೀಡಬೇಕೆಂದು ಕ್ಷೇತ್ರದ ಪಕ್ಷದ ಜಿ.ಪಂ.ಸದಸ್ಯ ಪ್ರಸನ್ನಕುಮಾರ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕಾಂಗ್ರೆಸ್ಗೆ ದಲಿತರು ಪ್ರಮುಖ ವೋಟ್ ಬ್ಯಾಂಕ್ ಆಗಿದ್ದಾರೆ. ಆದರೂ ದಲಿತ ನಾಯಕ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದು ತನ್ನ ಸ್ವಹಿತವನ್ನು ತ್ಯಾಗ ಮಾಡಿ ಪಕ್ಷಕ್ಕೋಸ್ಕರ ಹಗಲಿರುಳು ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತಂದು ತಾನು ಸೋಲುಂಡ ಪಕ್ಷದ ಮತ್ತೊಬ್ಬ ದಲಿತ ನಾಯಕ ಡಾ. ಜಿ ಪರಮೇಶ್ವರ್ಗೆ ಇನ್ನೊಂದೆಡೆ ಅನ್ಯಾಯವಾಗಿದೆ ಎಂದಿದ್ದಾರೆ. ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ದಿನದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ, ಪಕ್ಷವನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಆದರೆ ಈ ಕೆಲಸದಿಂದಾಗಿ ತಮ್ಮ ಸ್ವಕ್ಷೇತ್ರವಾದ ಕೊರಟಗೆರೆಗೆ ಹೆಚ್ಚು ಸಮಯ ತೊಡಗಿಸಿ ಕೊಳ್ಳಲಾರದೆ ಮತಯಾಚನೆಗೂ ಸಮಯ ಸಿಗದೆ ಕಡೆಯ ಮೂರು ದಿನಗಳು ಮಾತ್ರ ಮತಯಾಚನೆಯನ್ನು ಮಾಡಿದ ಪರಿಣಾಮ ಅವರಿಗೆ ಸೋಲುಂಟಾಗಿದೆ ಎಂದು ಮುಖಂಡರು ಹೇಳಿದರು. ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರೊಂದಿಗೆ ಪ್ರಮುಖ ಖಾತೆ ನೀಡಬೇಕು ಹಾಗೂ ಆಡಳಿತಾವಧಿಯ 5 ವರ್ಷದಲ್ಲಿ ಪರಮೇಶ್ವರ್ರನ್ನು ಎರಡೂವರೆ ವರ್ಷದ ನಂತರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದ್ದಾರೆ.ಎಪಿಎಂಸಿ ಸದಸ್ಯ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಪ.ಪಂ.ಸದಸ್ಯರಾದ ಮಂಜುನಾಥ್, ಸೈಯದ್ ಸೈಫುಲ್ಲಾ,ಬಲರಾಮಯ್ಯ, ಓಬಳರಾಜು, ರಿಯಾಸತ್ ಆಲಿ, ಸುರೇಶ್, ರವಿಕುಮಾರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.