ಡೊನೇಷನ್ ಹಾವಳಿ ನಿಲ್ಲಿಸದಿದ್ದರೆ ಹೋರಾಟ'
ತಿಪಟೂರು: ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಾರಂಭವಾಗಿದ್ದು, ಕೆಲ ಖಾಸಗಿ ಸಂಸ್ಥೆಗಳು ದೇಣಿಗೆ ರೂಪದಲ್ಲಿ ಅಕ್ರಮವಾಗಿ ಡೊನೇಷನ್ ವಸೂಲಿ ಮಾಡುತ್ತಿರುವುದು ಮತ್ತು ದಾಖಲಾತಿಗೆ ಸಂಗ್ರಹಿಸಬೇಕಾದ ಶುಲ್ಕ ಕುರಿತಂತೆ ಮೀಸಲಾತಿ ನಿಯಮವನ್ನು ಅನುಸರಿಸುತ್ತಿಲ್ಲ ಎಂದು ತಾಲೂಕು ಜನಪರ ಹೋರಾಟ ವೇದಿಕೆ ಆಪಾದಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರ ದಂಧೆಯನ್ನಾಗಿ ಮಾಡಿಕೊಂಡಿವೆ. ಇದು ಕಾನೂನು ಬಾಹಿರವಾಗಿದೆ. ಸರ್ಕಾರದ ಸುತ್ತೋಲೆ ಪ್ರಕಾರ ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾದ ಶಿಕ್ಷಣ ಇಲಾಖೆ ಮೃದು ಧೋರಣೆ ತಳೆದಿರುವುದು ತರವಲ್ಲ ಎಂದು ಸಂಘಟನೆ ಆರೋಪಿಸಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನಿತರೆ ಸಂಘಟನೆಗಳೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಕಾರ್ಯಾಧ್ಯಕ್ಷ ಹಿಂಡಿಸ್ಕೆರೆ ಶಿವಶಂಕರ್, ಅಧ್ಯಕ್ಷ ಮಾರನಗೆರೆ ನಿರಂಜನ್, ಉಪೇಂದ್ರ ಮತ್ತು ಕಾರ್ಯದರ್ಶಿ ನೆಟ್ ಕಿರಣ್ ಎಚ್ಚರಿಕೆ ನೀಡಿದ್ದಾರೆ.