ತ್ರಿನೇತ್ರ ನೃತ್ಯ ಶಾಲೆ ದಶಮಾನೋತ್ಸ
ಕನ್ನಡಪ್ರಭ ವಾರ್ತೆ, ತುಮಕೂರು, ಮೇ 14
ತುಮಕೂರಿನ ತ್ರಿನೇತ್ರ ನೃತ್ಯ ಶಾಲೆಯ ದಶಮಾನೋತ್ಸವ ಹಾಗೂ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭವನ್ನು ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಿಕೋದ್ಯಮಿ ಎಸ್. ನಾಗಣ್ಣ, 10 ವರ್ಷಗಳಿಂದ ನೃತ್ಯ ಶಾಲೆಯನ್ನು ನಡೆಸುತ್ತಾ ಸಾವಿರಾರು ಮಕ್ಕಳಿಗೆ ನೃತ್ಯ ಶಿಕ್ಷಣ ನೀಡುತ್ತಿರುವುದು ಹಾಗೂ ಬೇಸಿಗೆ ಶಿಬಿರ, ರಜಾ ದಿನಗಳಲ್ಲಿ ಶಿಬಿರದ ಮೂಲಕ ಸಾಂಸ್ಕೃತಿಕ ಮನೋಭಾವವನ್ನು ಬೆಳೆಸುತ್ತಿರುವ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ಅತಿಥಿಗಳಾಗಿದ್ದ ಡಾ. ಲಕ್ಷ್ಮಣದಾಸ್ ಮಾತನಾಡಿ, ಸಂಸ್ಥೆಯ ಹೆಚ್.ಆರ್. ನವೀನ್ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ತುಮಕೂರು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ತಮ್ಮ ಅಮೂಲ್ಯ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮಕ್ಕಳು ಗಾಯನ, ನೃತ್ಯ, ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಬೆಳೆಸಿಕೊಂಡು ಪ್ರತಿಭಾವಂತರಾಗಲಿ ಎಂದರು.
ತ್ರಿನೇತ್ರ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿಗಳಿಂದ ನಾಡಗೀತೆ, ಜನಪದಗೀತೆಗಳ ಸಮೂಹ ಗಾಯನ, ಸಾಹಸ ನೃತ್ಯ ಪ್ರದರ್ಶನ, ಮೋಹನ್ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ಮಾತನಾಡಿದರು.
ವೇದಿಕೆಯಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸಿ.ಬಿ. ರಂಗಯ್ಯ, ತುಮಕೂರು ನಗರ ಕಸಾಪ ಅಧ್ಯಕ್ಷೆ ಎಂ.ಸಿ. ಲಲಿತಾ, ವಿಶ್ವ ಚೇತನ ಪ್ರತಿಷ್ಠಾನದ ಅಧ್ಯಕ್ಷರಾದ ನಿ. ರಾ. ಸದಾನಂದ, ಗಾಯಕ ತು.ಮ. ಬಸವರಾಜು, ಪಿ. ಶಾಂತಿಲಾಲ್, ಹಾಸ್ಯ ಕಲಾವಿದ ಮೈಸೂರು ರಮಾನಂದ್, ನಿವೃತ್ತ ಮುಖ್ಯ ಶಿಕ್ಷಕ ಗುರುರಾಜರಾವ್, ನಗರಸಭಾ ಸದಸ್ಯೆ ವಿಜಯ ರುದ್ರೇಶ್, ರಾಷ್ಟ್ರೀಯ ಖೋ-ಖೋ ಕ್ರೀಡಾಪಟು ಶ್ರೀನಿವಾಸಮೂರ್ತಿ, ಆಕಾಶವಾಣಿ ಕಲಾವಿದೆ ಸುಧಾರತ್ನ, ಕಿರುತೆರೆ ನಟ ಯೋಗೀಶ್ ರಾಜ್, ಸಾಗರ್ ಪುರಾಣಿಕ್, ಧನಲಕ್ಷ್ಮಿ, ಅರುಣ್ಕುಮಾರ್ ಗ್ರಾಪಂ ಸದಸ್ಯ ಹೊಳಕಲ್ಲು ಗ್ರಾಪಂ ಸದಸ್ಯ ರಾಜಶೇಖರ್ ಉಪಸ್ಥಿತರಿದ್ದರು.