ವಿದ್ಯುತ್ ಅವಘಡ ತಡೆಗೆ ಸಹಕರಿಸಿ'
ತುಮಕೂರು: ವಿದ್ಯುತ್ ಕಂಬಗಳಿಗೆ ತಂತಿ, ಹಗ್ಗ ಕಟ್ಟಿ ಬಟ್ಟೆ ಒಣಗಿಸುವುದು, ಸಾಕು ಪ್ರಾಣಿಗಳನ್ನು ಕಂಬಕ್ಕೆ ಕಟ್ಟುವುದು, ಮನೆಗಳಿಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು, ವಿದ್ಯುತ್ ಮಾರ್ಗಗಳ ಕೆಳಗೆ ಕಟ್ಟಡ ನಿರ್ಮಿಸುವುದು, ಹುಲ್ಲಿನ ಬಣವೆ ಹಾಕುವುದು, ಮರಗಿಡ ನೆಡುವುದು, ತೋಟ ನಿರ್ಮಿಸುವುದು, ವಿದ್ಯುತ್ ಕಂಬಗಳಿಗೆ ಹಾಕಿರುವ ಆಧಾರ ತಂತಿಗಳನ್ನು ತೆಗೆಯುವುದು, ಇತ್ಯಾದಿ ಕೆಲಸಗಳನ್ನು ಮಾಡುವುದರಿಂದ ವಿದ್ಯುತ್ ಅಪಘಾತ ಸಂಭವಿಸಲಿದ್ದು, ಸಾರ್ವಜನಿಕರು ವಿದ್ಯುತ್ ಅಪಘಾತ ತಡೆಗಟ್ಟಲು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಮನವಿ ಮಾಡಿದ್ದಾರೆ.
ಬೆಂವಿಕಂ, ತುಮಕೂರು ನಗರ ಉಪವಿಭಾಗ-1 ವ್ಯಾಪ್ತಿಗೆ ಕೇಂದ್ರ ಶಾಖೆ, ಪೂರ್ವಶಾಖೆ, ಪಶ್ಚಿಮ ಶಾಖೆ, ಮತ್ತು ಉತ್ತರ ಶಾಖೆಗಳು ಒಳಪಟ್ಟಿದ್ದು, ಒಟ್ಟು 7461 ಗ್ರಾಹಕರು ನಗರ ಉಪವಿಭಾಗ-1ಕ್ಕೆ ಒಳಪಟ್ಟಿರುತ್ತಾರೆ. ಮತ್ತು ಒಟ್ಟು 1128 ವಿದ್ಯುತ್ ಪರಿವರ್ತಕಗಳಿದ್ದು, 1089 ಕಿ.ಮೀ. ಎಲ್ಟಿ ಮಾರ್ಗಗಳು ಹಾಗೂ 615 ಕಿ.ಮೀ. ಹೆಚ್.ಟಿ. ಮಾರ್ಗಗಳು ಮತ್ತು 37 ಸಂಖ್ಯೆಯ 11 ಕೆ.ವಿ. ಮಾರ್ಗದ ವಿದ್ಯುತ್ ಜಾಲವು ಜಿಲ್ಲೆಯಲ್ಲಿ ಹರಡಿದ್ದು, ಇವುಗಳಿಂದ ಆಗುವ ಆತಂಕಕಾರಿ ಅಪಘಾತಗಳು ಮತ್ತು ಬೆಂ.ವಿ.ಕಂ.ಗೆ ಮತ್ತು ಸಾರ್ವಜನಿಕರಿಗೆ ಆಗುವ ನಷ್ಟ ತಡೆಗಟ್ಟಲು ಸಾರ್ವಜನಿಕರು ಇಲಾಖೆಯ ಜೊತೆಗೆ ಸಹಕರಿಸುವಂತೆ ಬೆಂ.ವಿ.ಕಂ. ನಗರ ಉಪವಿಭಾಗ 1 ತುಮಕೂರು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಮನವಿ ಮಾಡಿದ್ದಾರೆ.
ಬೆಂ.ವಿ.ಕಂ. ನಗರ ಉಪವಿಭಾಗ 1 ರ ವ್ಯಾಪ್ತಿಯ ಪ್ರದೇಶಗಳಲ್ಲಿ ಬರುವ ಬೀದಿ ದೀಪಗಳ ಸುಸ್ಥಿತಿಯಲ್ಲಿಲ್ಲದ ಮತ್ತು ಸುರಕ್ಷಿತವಲ್ಲದ ಕಂಟ್ರೋಲ್ ಸ್ವಿಚ್ಗಳನ್ನು ಸಾರ್ವಜನಿಕರು ಬಳಕೆ ಮಾಡಬಾರದು. ಮತ್ತು ಬೆಂ.ವಿ.ಕಂ.ಯ ಅಧಿಕೃತ ಪರವಾನಗಿ ಇಲ್ಲದೆ ಸಾರ್ವಜನಿಕರೇ ವಿದ್ಯುತ್ಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಇದರಿಂದ ಆಗಬಹುದಾದ ಅನಾಹುತಗಳಿಗೆ ಬೆಂ.ವಿ.ಕಂ. ಜವಾಬ್ದಾರಿಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.