ಹಿಂದುಳಿದ ತಾ.ಗಳಿಗೆ ಬೀಳುವುದೇ ನೆರವಿನ ಮಳೆ
ತುಮಕೂರು: ನಂಜುಂಡಪ್ಪ ವರದಿ ಪ್ರಕಾರ ತುಮಕೂರು ಜಿಲ್ಲೆಯಲ್ಲಿ 4 ಹಿಂದುಳಿದ ತಾಲೂಕುಗಳಿದ್ದು ಈ ಬಾರಿಯಾದರೂ ಈ ತಾಲೂಕುಗಳಿಗೆ ನೆರವು ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.
ನದಿ ಮೂಲವಿಲ್ಲದೆ ಕೇವಲ ಮಳೆಯಾಶ್ರಿತ ಭೂಮಿ ಹೊಂದಿರುವ ಪಾವಗಡ, ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕು ಹಿಂದುಳಿದಿದ್ದು ಈ ಭಾಗದಿಂದ ಆರಿಸಿ ಬಂದಿರುವ ಶಾಸಕರಿಂದ ನೆರವು ಸಿಗುತ್ತದಯೇ ಎಂದು ಜನತೆ ಚಾತಕ ಪಕ್ಷಿಯಾಗಿದ್ದಾರೆ.
50 ಎಕರೆ ಜಮೀನು ಇದ್ದರೂ ಕೂಲಿ ಕೆಲಸ ಮಾಡುವ ಸ್ಥಿತಿ ಪಾವಗಡ ತಾಲೂಕಿನ ರೈತರದ್ದಾಗಿದೆ. ಇದಕ್ಕೆ ಬಹು ಮುಖ್ಯ ಕಾರಣ ನೀರಾವರಿ ಇಲ್ಲದ್ದು ಮತ್ತು ಸದಾ ಕೈಕೊಡುವ ಮಳೆ. ಹೀಗಾಗಿ ಜಮೀನುದಾರರು ಕೂಡ ಇಲ್ಲಿ ಕೂಲಿ ಕೆಲಸ ಮಾಡುವಂತಾಗಿದೆ.
ಅಲ್ಲದೇ ಯಾವುದೇ ಕೈಗಾರಿಕೆ ಕೂಡ ಪಾವಗಡದಲ್ಲಿ ಇಲ್ಲ. ಇನ್ನೊಂದೆಡೆ ಫ್ಲೋರೈಡ್ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಹೀಗಾಗಿ ಈ ಭಾಗದ ಯುವಕರು ಉದ್ಯೋಗ ಮತ್ತಿತರ ಕಾರಣಕ್ಕಾಗಿ ಬೆಂಗಳೂರಿನ ಕಡೆ ಮುಖ ಮಾಡಿದ್ದಾರೆ. ಈಗಲಾದರೂ ಸರ್ಕಾರವು ಶಾಶ್ವತ ನೀರಾವರಿ ಕಲ್ಪಿಸುವ ಯೋಜನೆ ರೂಪಿಸಬೇಕಾಗಿದೆ. ಈ ಕ್ಷೇತ್ರದಿಂದ ಜೆಡಿಎಸ್‌ನ ಕೆ.ಎಂ. ತಿಮ್ಮರಾಯಪ್ಪ ಆಯ್ಕೆಯಾಗಿದ್ದಾರೆ.
ಮಧುಗಿರಿ: ಇನ್ನು ಮಧುಗಿರಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.
ಏಕಶಿಲಾ ಬೆಟ್ಟವನ್ನು ಹೊಂದಿರುವ ಮಧುಗಿರಿಯಲ್ಲಿ ನೀರಿನ ಸಮಸ್ಯೆ ಜತೆಗೆ ಮೂಲಭೂತ ಸಮಸ್ಯೆ ಕೂಡ ಇದೆ.
ಇಲ್ಲೂ ಕೂಡ ಯಾವುದೇ ಕೈಗಾರಿಕೆ ಇಲ್ಲ. ಈ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಆರಿಸಿ ಬಂದಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿರುವುದರಿಂದ ಒಂದಷ್ಟು ನೆರವು ಸಿಗಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ.
ಇನ್ನು ಕೊರಟಗೆರೆ ಸ್ಥಿತಿ ಕೂಡ ಭಿನ್ನವಾಗಿಲ್ಲ. ಇದು ಕೂಡ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಈ ಕ್ಷೇತ್ರವನ್ನು ಸಿ. ಚನ್ನಿಗಪ್ಪ ಅವರು ಪ್ರತಿನಿಧಿಸುತ್ತಿದ್ದರು. ಅಲ್ಲದೇ ಸಚಿವರಾಗಿಯೂ ಇದ್ದರು.
ಆಗಲೂ ಕೊರಟಗೆರೆಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗಲಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಈ ಕ್ಷೇತ್ರ ಮೀಸಲು ಕ್ಷೇತ್ರವಾಯ್ತು. ಆಗ ಈ ಕ್ಷೇತ್ರದಿಂದ ಡಾ. ಜಿ. ಪರಮೇಶ್ವರ್ ಆಯ್ಕೆಯಾಗಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದುದ್ದರಿಂದ ದೊಡ್‌ಡ ಮಟ್ಟದ ಅನುದಾನ ಸಿಗಲಿಲ್ಲ.
ಹೀಗಾಗಿ ಈ ತಾಲೂಕು ಕೂಡ ಹಿಂದುಳಿಯಿತು.
ಈಗ ಪರಮೇಶ್ವರ್ ಈ ಕ್ಷೇತ್ರದಿಂದ ಸೋತಿರಬಹುದು. ಆದರೆ ಸರ್ಕಾರದಲ್ಲಿ ಅವರು ಸಚಿವರಾಗುವ ನಿರೀಕ್ಷೆ ಇರುವುದರಿಂದ ಒಂದಷ್ಟು ಅನುದಾನ ಕೊರಟಗೆರೆ ಕ್ಷೇತ್ರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಜನರದ್ದಾಗಿದೆ. ಈ ಕ್ಷೇತ್ರದಿಂದ ಜೆಡಿಎಸ್ ಸುಧಾಕರ್‌ಲಾಲ್ ಆಯ್ಕೆಯಾಗಿದ್ದಾರೆ.
ಇನ್ನು ಶಿರಾ ಕ್ಷೇತ್ರದಿಂದ ಟಿ.ಬಿ. ಜಯಚಂದ್ರ ಆಯ್ಕೆಯಾಗಿದ್ದಾರೆ. ಇದು ಕೂಡ ಅತ್ಯಂತ ಹಿಂದುಳಿದ ತಾಲೂಕು.
ಕಳೆದ ಸಾಲಿನಲ್ಲಿ ಜಯಚಂದ್ರ ಅವರು ಈ ಕ್ಷೇತ್ರಕ್ಕೆ ಒಂದಷ್ಟು ನೀರಾವರಿ ಯೋಜನೆ ತಂದಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದರಿಂದ ಮತ್ತಷ್ಟು ನೆರವಿನ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.
ಒಟ್ಟಾರೆಯಾಗಿ ಸದಾ ಬರಗಾಲ, ಬಡತನದಿಂದ ತತ್ತರಿಸಿ ಹೋಗುತ್ತಿರುವ ಹಿಂದುಳಿದ ತಾಲೂಕುಗಳ ಈ ಭಾಗದ ಜನತೆ ಹೊಸ ಸರ್ಕಾರದಿಂದ ಭರಪೂರ್ತಿ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕಾದು ನೋಡಬೇಕಿದೆ.
-ಉಗಮ ಶ್ರೀನಿವಾಸ್