'ಕಾರ್ಯಕರ್ತರು, ಮತದಾರರ ಹಿತ ಕಾಯಲು ಬದ್ಧ'
ಕ.ಪ್ರ. ವಾರ್ತೆ , ತಿಪಟೂರು , ಮೇ 15
ತಾಲೂಕು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನ ಗೆಲವಿಗೆ ಹತ್ತು ಹಲವಾರು ಕಾರಣಗಳಿಂದ ಹಿನ್ನಡೆಯಾಗಿದ್ದರ ಪರಿಣಾಮ ಸೋಲನ್ನನುಭವಿಸಬೇಕಾಯಿತು. ನನಗಾಗಿ ಹಗಲಿರುಳೂ ಶ್ರಮಿಸಿರುವ ಸಾವಿರಾರು ಮತದಾರರು, ಕಾರ್ಯಕರ್ತರು ಮತ್ತು ಮುಖಂಡರುಗಳ ಹಿತ ಕಾಯಲು ಬದ್ಧನಾಗಿರುತ್ತೇನೆಂದು ಅಭ್ಯರ್ಥಿಯಾಗಿದ್ದ ಲೋಕೇಶ್ವರ ಹೇಳಿದರು.
ನಗರದ ಗುರುಲೀಲ ಕಲ್ಯಾಣ ಮಂಟಪದಲ್ಲಿ ಕೆಜೆಪಿ ಸೋಲಿನ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರುಗಳ ನಡುವೆ ಏರ್ಪಡಿಸಿದ್ದ ಆತ್ಮಾವಲೋಕನಾ ಸಮಾರಂಭದಲ್ಲಿ ಮಾತನಾಡಿದ ಲೋಕೇಶ್ವರ ಸೋಲು ಗೆಲವಿಗೆ ಹಿಗ್ಗುವ ಕುಗ್ಗುವ ಜಾಯಮಾನ ನನ್ನದಲ್ಲ. ಸರ್ಕಾರಿ ಅಧಿಕಾರಿಯಾಗಿದ್ದ ನಾನು ಸ್ವಯಂ ನಿವೃತ್ತಿ ಪಡೆದು ರಾಜಕಾರಣಕ್ಕೆ ಬಂದಿದ್ದೇ ನನ್ನ ತಾಲೂಕಿನ ಅಭಿವೃದ್ದಿಗೆ ಮತ್ತು ಇಲ್ಲಿನ ಜನತೆಯ ಸೇವೆ ಮಾಡಬೇಕೆಂದು. ಈ ಚುನಾವಣೆಗೆ ನಾನು ಧುಮುಕಿದ್ದೇ ಚುನಾವಣೆ ಕೇವಲ 3 ತಿಂಗಳಿರುವಾಗ.
ತಾಲೂಕಿನಲ್ಲಿ 2 ಬಾರಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಕ್ಷೇತ್ರದಲ್ಲಿ ಅನುಕಂಪದ ಅಲೆ ಜತೆಗೆ ರಾಜ್ಯ ಮಟ್ಟದಲ್ಲಿಯೂ ಬೀಸಿದ್ದ ಕಾಂಗ್ರೆಸ್ ಗಾಳಿ ಹಾಗೂ ಬಿಜೆಪಿ ಎತ್ತಿಕಟ್ಟಿದ ಜಾತಿ ರಾಜಕಾರಣ ಮತ್ತು ಯಥೇಚ್ಚವಾಗಿ ಎರಡೂ ಪಕ್ಷಗಳು ಒಡ್ಡಿದ ಹಣ-ಹೆಂಡದ ಆಮಿಶಗಳು ನಮ್ಮ ಕಾರ್ಯಕರ್ತರನ್ನು ಕುಗ್ಗಿಸಿದ್ದರಿಂದ ನಮಗೆ ಸೋಲಾಯಿತು ಎಂದರು.
ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿಗೂ ಶುಭವಾಗಲಿ. ನಿಮ್ಮ ಹಿತ ಕಾಯುವ ಕೆಲಸವನ್ನು ನಾನು ಸದಾ ಮಾಡಲು ಬದ್ದನಾಗಿದ್ದೇನೆ ಎಂದು ಲೋಕೇಶ್ವರ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಮುಖಂಡ ತರಕಾರಿ ನಾಗರಾಜು ಮಾತನಾಡಿ ನಮ್ಮ ಪಕ್ಷ ಸೋತಾಗಲೂ ಬಹುದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವ ಕಾರ್ಯಕರ್ತರುಗಳ ಉತ್ಸಾಹ ಯಾವಾಗಲೂ ಇದೇ ಪ್ರೀತಿ, ವಿಶ್ವಾಸ ಇಟ್ಟುಕೊಳ್ಳುವ ಮೂಲಕ ಪಕ್ಷ ಸಂಘಟನೆಯನ್ನು ಗುರಿಯಾಗಿಸಿಕೊಳ್ಳೋಣ ಎಂದರು.
ರಂಗಾಪುರ ದೇವರಾಜು,ಆಲದಹಳ್ಳಿ ವಿಶ್ವನಾಥ್, ಸೇರಿದಂತೆ ಅನೇಕ ಮುಖಂಡರುಗಳು ಸೋಲು ಗೆಲವಿನ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದರು.
ಸಭೆಯಲ್ಲಿ ನಗರಸಭಾ ಸದಸ್ಯ ನಿಜಗುಣ, ಗೊರಗೊಂಡನಹಳ್ಳಿ ರಾಜು, ಮುಖಂಡರುಗಳಾದ ಕೆ.ಆರ್. ಸಿದ್ಧರಾಮಣ್ಣ, ಸಂತೋಷ್, ಅಧ್ಯಕ್ಷ ರಘುಪತಿ, ಕಾರ್ಯದರ್ಶಿ ಮಲ್ಲೇಶ್, ನಾಸಿರ್ ಖಾನ್, ಮುನ್ನಾ ಸೇರಿದಂತೆ ಅನೇಕರು ಹಾಜರಿದ್ದರು.