ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆಡವಲು ನಿಮಿಷ, ನಿರ್ಮಿಸಿಲ್ಲ ಕಳೆದರೂ 8 ವರ್ಷ

Vishwanath S
Updated On : 16 May 2013, 12:09 pm

ಕ.ಪ್ರ. ವಾರ್ತೆ ,  ಕುಣಿಗಲ್ ,  ಮೇ 15
ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ನೆಪದಲ್ಲಿ ಪುರಸಭೆ ಬಸ್ ನಿಲ್ದಾಣದ ಮಳಿಗೆಗಳು ಕೆಡವಲ್ಪಟ್ಟು ಎಂಟು ವರ್ಷಗಳೇ ಕಳೆಯುತ್ತಾ ಬಂದರೂ, ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಪುರಸಭೆ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಯಾವುದೇ ಪ್ರಗತಿ ಕಾಣದೆ ಪ್ರಯಾಣಿಕರ, ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯಭಾಗದಲ್ಲಿರುವ, ಪುರಸಭೆಗೆ ಸೇರಿದ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿದ್ದ ಮಳಿಗೆಗಳನ್ನು 2005, ಮಾರ್ಚ್ 5ರಲ್ಲಿ ಅಂದಿನ ಪುರಸಭಾಡಳಿತ ಮತ್ತು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ, ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ನೆಪದಲ್ಲಿ ಏಕಾಏಕಿ ತೆರವುಗೊಳಿಸಿದ್ದರು. ಇದರಿಂದಾಗಿ ಮಳಿಗೆಗಳನ್ನು ಆಶ್ರಯಿಸಿದ್ದ ಹಲವಾರು ಕುಂಟುಂಬಗಳು ಬೀದಿ ಪಾಲಾದವು. ಮಳಿಗೆ ತೆರವುಗೊಳಿಸುವ ಸಮಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನು ಕೆಲವೇ ತಿಂಗಳೊಳಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ, ಈ ಹಿಂದೆ ಇದ್ದವರಿಗೆ ಆದ್ಯತೆ ಮೇರೆಗೆ ನೀಡುವ ಭರವಸೆ ನೀಡಿದ್ದರು.
ಆದರೆ, ಮಳಿಗೆಗಳನ್ನು ತೆರವುಗೊಳಿಸಿ ಎಂಟು ವರ್ಷವಾದರೂ ಪುರಸಭಾ ಜನಪ್ರತಿನಿಧಿಗಳಾಗಲಿ, ಕೆಡುವ ಕಾಲದಲ್ಲಿ ಜೆಡಿಎಸ್ ಶಾಸಕರಿದ್ದು, ನಂತರ ಕಾಂಗ್ರೆಸ್ ಶಾಸಕರು ಅಧಿಕಾರ ಪೂರ್ಣಗೊಳಿಸಿ ಹೋಗಿದ್ದರೂ, ಅಧಿಕಾರಿ ವರ್ಗದವರಾಗಲಿ ಬಸ್ ನಿಲ್ದಾಣದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣ ವಾಗಿದೆ. ಈ ಮಧ್ಯೆ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಧೋರಣೆಯಿಂದಾಗಿ, ಬಸ್ ನಿಲ್ದಾಣ ಪ್ರದೇಶವು ವ್ಯಾಪಕವಾಗಿ ಒತ್ತುವರಿಯಾಗಿದೆ.
ಪುರಸಭೆ ಸ್ವತ್ತು ಒತ್ತುವರಿಯಾಗಿರುವ ಮಾಹಿತಿ ಪುರಸಭೆ ಬಳಿ ಇದ್ದರೂ, ಬಸ್ ನಿಲ್ದಾಣ ಒತ್ತುವರಿ, ತೆರವುಗೊಳಿಸಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಸಹ, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಪುರಸಭೆಯಿಂದ ಈ ಜಾಗದಲ್ಲಿ ಹೈಟೆಕ್ಬ್‌ಸಸ್ನಿಲ್ಧಾಣ ನಿರ್ಮಿಸಲು ತೆರವುಗೊಳಿಸಿದ ಸಮಯದಲ್ಲೆ ತುಮಕೂರು ಖಾಸಗಿ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದು. ಅಲ್ಲಿ ಈಗಾಗಲೆ ಬಸ್ ಸಂಚಾರ ಪ್ರಾರಂಭವಾಗಿದ್ದರೆ, ಇಲ್ಲಿ ಮಾತ್ರ ಇದುವರೆಗೆ ಯಾವುದೇ ಪ್ರಗತಿ ಕಾಣದಿರುವುದು ನೋಡಿದರೆ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಹಾಗೂ ಬದ್ದತೆಯ ಕೊರತೆ ಎದ್ದು ಕಾಣುತ್ತಿದೆ.
ಪುರಸಭೆಯಿಂದ ಈ ಪ್ರದೇಶದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಬರೀ ನಕ್ಷೆಗಾಗಿಯೇ ಲಕ್ಷಾಂತರ ರೂ.ಗಳನ್ನು ವ್ಯಯಿಸಿದ್ದು, ನಿರ್ಮಾಣಕ್ಕೆ ಐಡಿಎಸ್‌ಎಂಟಿ ಯೋಜನೆಯಡಿಯಲ್ಲಿ 60ಲಕ್ಷ ಮೀಸಲಿರಿಸಿ, ಕಳೆದ ಎಂಟು ವರ್ಷಗಳಲ್ಲಿ ಇದಕ್ಕೆ ಸುಮಾರು 27ಲಕ್ಷ ರೂ.ಗೂ ಹೆಚ್ಚಿನ ಬಡ್ಡಿ ಬಂದು ಈಗ 88 ಲಕ್ಷಕ್ಕೂ ಹೆಚ್ಚಿನ ಹಣ ಇದೆ. ಕೇಂದ್ರ ಸರ್ಕಾರದ ಈ ಯೋಜನೆ ಈಗಾಲೆ ಮುಕ್ತಾಯಗೊಂಡು, ಹಣ ಹಿಂದಿರುಗಿಸುವಂತೆ ಪುರಸಭೆಗೆ ಹಲವು ಪತ್ರಗಳು ಬಂದಿವೆ. ಮೊದಲ ಹಂತದ ಕಾಮಗಾರಿ ಪ್ರಾರಂಭಕ್ಕೆ ಹಣ ಮತ್ತು ಸೂಕ್ತ ಸ್ಥಳ ಇದ್ದರೂ, ಸ್ಥಳೀಯ ಪುರಸಭಾ ಜನಪ್ರತಿನಿಧಿಗಳ ಇಚ್ಚಾಶಕ್ತಿ ಹಾಗೂ ಅಧಿಕಾರಿಗಳ ಬದ್ದತೆ ಕೊರತೆಯಿಂದ ಕಾಮಗಾರಿ ಪ್ರಾರಂಭವಾಗಿಲ್ಲ.
ಇದರಿಂದಾಗಿ ದಿನಂಪ್ರತಿ ತುಮಕೂರು, ಮದ್ದೂರು, ಮಂಡ್ಯ, ಮೈಸೂರು,ಮಾಗಡಿ ಕಡೆಯಿಂದ ಬಂದು ಹೋಗುವ ಸಾವಿರಾರು ಪ್ರಯಾಣಿಕರು, ನೂರಾರು ಬಸ್ ಸಂಚರಿಸುವ ಪುರಸಭೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಮರೀಚಿಕೆಯಾಗಿ ಉಳಿದು, ಪ್ರಯಾಣಿಕರು ಪರದಾಡುವಂತಾಗಿದೆ. ಈ ಮಧ್ಯೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ತಾಲೂಕು ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾದರೂ, ಪುರಸಭೆಯಲ್ಲಿ ಮಾತ್ರ ಜೆಡಿಎಸ್ ಅಧಿಕಾರದಲ್ಲೆ ಇದೆ. ಎಂಟು ವರ್ಷಗಳಿಂದ ಸತತ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಅವಧಿಯಲ್ಲಿ ಬಸ್‌ನಿಲ್ದಾಣ ಮಳಿಗೆ ಕೆಡವಲಾಗಿದ್ದರೂ, ಪುನಃ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಆ ಪಕ್ಷದ ಜನಪ್ರತಿನಿಧಿಗಳ ಇಚ್ಚಾಶಕ್ತಿಯನ್ನು ಪ್ರಶ್ನಿಸುವಂತಾಗಿದೆ. ವಿಧಾನಸಬಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದ ಶಾಸಕರೇ ಆಯ್ಕೆಯಾಗಿದ್ದು, ಹಾಲಿ ಶಾಸಕರ ಕಾರ್ಯಸ್ಥಾನವೂ ಪುರಸಭೆ ಬಸ್ ನಿಲ್ದಾಣದಲ್ಲಿನ ಪೆಟ್ರೋಲ್ ಬಂಕ್ ಆಗಿರುವುದರಿಂದ, ಇನ್ನಾದರೂ ನೂತನ ಶಾಸಕ ಡಿ.ನಾಗರಾಜಯ್ಯ ತಮ್ಮ ಇಚ್ಚಾಶಕ್ತಿ ಪ್ರದರ್ಶಿಸಿ, ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುವರೆ ಎಂದು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement