ಬಿಸಿಲ ಜತೆಗೆ ಏರುತ್ತಿರುವ ತರಕಾರಿ ಬೆಲೆ
ಶಿರಾ: ದಿನೇ ದಿನೇ ಏರುತ್ತಿರುವ ಬಿಸಿಲಿನ ತಾಪ ತರಕಾರಿ ಬೆಲೆಗಳನ್ನೂ ಏರಿಸುತ್ತಾ ಸಾರ್ವಜನಿಕರ ಜೀವನಕ್ಕೆ ಬಿಸಿ ಮುಟ್ಟಿಸುತ್ತಿದೆ.
ಕೆಲ ವರ್ಷಗಳ ಹಿಂದೆ ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಆಣಿ, ಒಂದೆರಡು ರುಪಾಯಿ ಲೆಕ್ಕದಲ್ಲಿ ಕಡಿಮೆ ಕಾಸು ಕೊಟ್ಟು ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಮೆಣಸಿನ ಕಾಯಿ, ಒಂದು ಗುಡ್ಡೆ ಕ್ಯಾರೆಟ್ ತೆಗೆದುಕೊಂಡು ಬಾ ಎಂದು ಹೇಳಿ ಕಳುಹಿಸುತ್ತಿದ್ದರು. ಮಾರುಕಟ್ಟೆಯಿಂದ ಏನಾದರೂ ಅಲ್ಪ ಸ್ವಲ್ಪ ಹೆಚ್ಚು ಬೆಲೆ ನೀಡಿ ತರಕಾರಿ ತಂದರೆ ಮನೆಯಲ್ಲಿ ಹಣದ ಬೆಲೆ ನಿಮಗೆ ಏನು ಗೊತ್ತಿದೆ ಎಂದು ಬೈಯುತ್ತಿದ್ದರು.
ಆದರೆ ಇಂದು ತರಕಾರಿ ಮಾರುಕಟ್ಟೆಗೆ ಹೋದರೆ ನಾಲ್ಕಾಣೆ, ಎಂಟಾಣೆಗಳು ಇರಲಿ 5 ರುಪಾಯಿ ಸಹ ಚಲಾವಣೆಯಲ್ಲಿ ಇಲ್ಲದಂತಾಗಿದೆ. ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ 5 ರೂಗೆ ಕೊತ್ತಂಬರಿ ಸೊಪ್ಪು, ಪುದಿನಾ, ದಂಟಿನ ಸೊಪ್ಪು, ಚಕೌತ ಸೊಪ್ಪು ದೊರೆಯುತ್ತಿತ್ತು. ಈಗ 10 ರೂಗಳಿಗೆ ಕಡಿಮೆ ಯಾವುದೇ ಸೊಪ್ಪುಗಳು ಸಿಗುವುದಿಲ್ಲ. ಟೊಮೊಟೋ ಕೆಜಿಗೆ 5-10 ರೂ ಇದ್ದುದು 40 ರು.ಗೆ ಏರಿದೆ. ಹಸಿ ಮೆಣಸಿನ ಕಾಯಿ ಕೆಜಿಗೆ 80 ರು. ಮುಟ್ಟಿದೆ. ಹುರುಳಿಕಾಯಿ 20 ರು. ಇದ್ದುದು 60 ರಿಂದ 80 ರು. ಆಗಿದೆ. ಸಮಾಧಾನಕರ ಅಂಶವೆಂದರೆ ಆಲುಗೆಡ್ಡೆ ಮತ್ತು ಈರುಳ್ಳಿ ಮಾತ್ರ ಕೆಜಿಗೆ 20 ರು. ಆಸುಪಾಸಿನಲ್ಲಿಯೆ ಇದೆ. ದೊಡ್ಡಮೆಣಸಿನ ಕಾಯಿ, ಕ್ಯಾರೆಟ್, ನವಿಲುಕೋಸು, ಬದನೆಕಾಯಿ, ಹಾಗಲಕಾಯಿ, ಹೀಗೆ ಯಾವುದನ್ನೆ ವಿಚಾರಿಸಿದರೆ ಕೆಜಿಗೆ 40 ರಿಂದ 50 ರು. ಬೆಲೆ ಇದೆ.
ತೊಂಡೆ ಕಾಯಿ ಹಾಗೂ ಬೀಟ್ರೋಟ್ ಮಾತ್ರ 25-30 ರು. ಕೆಜಿಗೆ ಇದೆ. ತರಕಾರಿ ಮಾರುಕಟ್ಟೆಯ ಅಂಗಡಿ ಮಾಲೀಕ ಚನ್ನನಕುಂಟೆ ಕೆಂಚಪ್ಪ, ಶಾರದಮ್ಮ, ಯಲಿಯೂರು ಚಂದ್ರಣ್ಣ ಹೇಳುವ ಪ್ರಕಾರ ಈ ಹಿಂದೆ ನಾಲ್ಕೈದು ಸಾವಿರ ಹಣ ಇಟ್ಟುಕೊಂಡು ಸಗಟು ಮಾರುಕಟ್ಟೆಗೆ ಹೋಗಿ ತರಕಾರಿ ಕೊಂಡು ತರುತ್ತಿದ್ದು, ಇದೀಗ 10 ರಿಂದ 20 ಸಾವಿರ ರೂಗಳನ್ನು ಇಟ್ಟುಕೊಂಡು ಸಗಟು ಮಾರುಕಟ್ಟೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ತರಕಾರಿಗಳು ತಾಜಾ ವಸ್ತುಗಳಾಗಿದ್ದು ಹೆಚ್ಚು ಕಾಲ ತಡೆಯದ ಕಾರಣ ಹೆಚ್ಚಾಗಿ ಸಹ ಕೊಂಡು ತಂದರೆ ಉಳಿದು ಕೊಳೆತ ತರಕಾರಿಗಳು ಅಂಗಡಿ ಮಾಲಿಕನನ್ನು ಮುಳುಗಿಸಿ ಬಿಡುತ್ತದೆ. ತರಕಾರಿ ವ್ಯಾಪಾರ ಕೂಡ ಬಹಳ ಕಷ್ಟಕರವಾಗಿದೆ ಎಂದು ತಿಳಿಸಿದರು.
ಒಟ್ಟಾರೆ ಏರಿರುವ ತರಕಾರಿಗಳು ಈಗಾಗಲೇ ಗಗನದಲ್ಲಿರುವ ದಿನಸಿ ಬೆಲೆಗಳೊಂದಿಗೆ ಸೇರಿ ಸಾಮಾನ್ಯರ ಜನಜೀವನ ಕಷ್ಟಕರವಾಗುತ್ತಿದೆ. ನೂತನ ಸರ್ಕಾರವು ಕೂಡಲೇ ಏರುತ್ತಿರುವ ಬೆಲೆಗಳನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಬೇಕಾಗಿದೆ.