ಕಿಡಿಗೇಡಿಗಳಿಂದ ಬೆಟ್ಟಗುಡ್ಡಗಳಿಗೆ ಬೆಂಕಿ: ಪರಿಸರ ನಾಶ- ದಾಸಪ್ಪ
ಕ.ಪ್ರ. ವಾರ್ತೆ , ಪಾವಗಡ , ಮೇ 17
ಕಿಡಿಗೇಡಿಗಳು ಬೆಟ್ಟಗುಡ್ಡಗಳಿಗೆ ಬೆಂಕಿ ಇಡುವುದರಿಂದ ಪರಿಸರ ನಾಶವಾಗುವುದಲ್ಲದೇ ವನ್ಯ ಜೀವಿಗಳು ಹಾಗೂ ಮೇವು ಆಶ್ರಯಿಸಿಕೊಂಡ ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ವಿಶ್ವ ಗ್ರಾಮೋದಯ ಸೇವಾ ಸಂಸ್ಥೆ ಅಧ್ಯಕ್ಷ ದಾಸಪ್ಪ ಆರೋಪಿಸಿದ್ದಾರೆ.
ವಿಶ್ವ ಗ್ರಾಮೋದಯ ಸೇವಾ ತಂಡದೊಂದಿಗೆ ವನ್ಯ ಜೀವಿಗಳ ಸಂಶೋದನೆ ಕುರಿತು ಬೆಟ್ಟಗುಡ್ಡಗಳಲ್ಲಿ ಪ್ರವಾಸ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ದಾಸಪ್ಪ, ಪಾವಗಡ ತಾಲೂಕು ಬಹುತೇಕ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು ಗಿಡ ಮೂಲಿಕೆಗಳು ಹಾಗೂ ಪ್ರಕೃತಿ ಸೌಂದರ್ಯ ಹೊಂದಿದೆ. ಅಲ್ಲದೆ ಇಲ್ಲಿನ ಬೆಟ್ಟಗುಡ್ಡಗಳು ರಮಣೀಯವಾಗಿದ್ದು ಪ್ರಾಣಿ ಪಕ್ಷಿಗಳು ಸೇರಿದಂತೆ ಮೇವು ಒದಗಿಸುವ ತಾಣಗಳಾಗಿವೆ. ಜೂನ್ ಜುಲೈವರೆಗೆ ಜಾನುವಾರುಗಳಿಗೆ ಮೇವು ಹುಲ್ಲನ್ನು ಒದಗಿಸುತ್ತಿವೆ ಎಂದರು. ಬೆಟ್ಟಗಳಿಗೆ ಬೆಂಕಿ ಹಚ್ಚಿ ಪರಿಸರ ನಾಶಕ್ಕೆ ಕಾರಣರಾದ ಕಿಡಿಗೇಡಿಗಳ ಪತ್ತೆಗಾಗಿ ಈಗಾಗಲೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ವಿಶ್ವ ಗ್ರಾಮೋದಯ ಸೇವಾ ಸಂಸ್ಥೆಯೊಂದಿಗೆ ಕೈಜೋಡಿಸಿ ಪರಿಸರ ಸಂರಕ್ಷಿಸಿ ಎಂದು ಅವರು ಮನವಿ ಮಾಡಿದ್ದಾರೆ.