ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಡಿವ ನೀರಿನ ವ್ಯವಸ್ಥೆಗೆ ತುರ್ತು ಕ್ರಮ

Vishwanath S
Updated On : 17 May 2013, 10:08 am

ಕ.ಪ್ರ. ವಾರ್ತೆ ,  ತುಮಕೂರು ,  ಮೇ 17
ಬೋರ್‌ವೆಲ್‌ಗಳು ಬತ್ತಿಹೋಗಿರುವ ಅಥವಾ ಇಳುವರಿ ಕಡಿಮೆಯಾಗಿರುವ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಕೈಗೊಳ್ಳಬಹುದಾದ ಪರ್ಯಾಯ ಕ್ರಮದ ಬಗ್ಗೆ ಯೋಜನೆ ರೂಪಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2013-14 ನೇ ಸಾಲಿಗೆ ಜನಗಳಿಗೆ  ಮತ್ತು ಜಾನುವಾರುಗಳಿಗೆ ಕುಡಿಯುವ  ನೀರಿನ ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತರ್ಜಲ ಕಡಿಮೆಯಾಗಿರುವ, ಬತ್ತಿಹೋಗಿರುವ ಕೊಳವೆ ಬಾವಿಗಳಲ್ಲಿ ಜನ ಮರುಪೂರಣಗೊಳಿಸಲು ಅಥವಾ ಪರ್ಯಾಯ ವ್ಯವಸ್ಥೆಗೆ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಡಿಸಿ ಗಮನಕ್ಕೆ ತನ್ನಿ: ಜಿಲ್ಲೆಯಲ್ಲಿ ಯಾವುದೇ ಕೆರೆಗಳು ಒತ್ತುವರಿಯಾದಲ್ಲಿ ಅದನ್ನು ಅಧಿಕಾರಿಗಳು ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದು.  ಅಧಿಕೃತ ಸರ್ವೇಯರ್ ಮೂಲಕ ಅಂತಹ ಪ್ರದೇಶಗಳಲ್ಲಿ ಸರ್ವೆ ಮಾಡಿಸುವ ಹೊಣೆ ಕಂದಾಯ ಇಲಾಖೆಯ ಅಧಿಕಾರಿಗಳದ್ದಾಗಿರುತ್ತದೆ ಎಂದರು.
ಅಪರಾಧ: ಯಾವುದೇ ಕಾರಣಕ್ಕೂ ಒಂದು ಬೋರ್‌ವೆಲ್‌ನಿಂದ ಮತ್ತೊಂದು ಬೋರ್‌ವೆಲ್‌ನ ಅಂತರ 300 ಅಡಿಗಿಂತ ಕಡಿಮೆ ಇರಬಾರದು.  300 ಅಡಿ ಅಂತರದೊಳಗೆ ಬೋರ್‌ವೆಲ್ ಕೊರೆದಲ್ಲಿ ಅದು ಅಪರಾಧವಾಗುತ್ತದೆ ಎಂದು ಅವರು ಈ ಸಂದರ್ಭ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅರಣ್ಯೀಕರಣ, ಜಲಾನಯನ ಅಭಿವೃದ್ಧಿ, ಮಳೆನೀರು ಕೊಯ್ಲು ಮುಂತಾದ ಕ್ರಮಗಳು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು.  ಜಿಲ್ಲೆಯಲ್ಲಿನ ಗೋಮಾಳ ಪ್ರದೇಶ ಮತ್ತು ಕೃಷಿಚಟುವಟಿಕೆ ಇಲ್ಲದ ಖಾಲಿ ಭಾಗಗಳಲ್ಲಿ ಅರಣ್ಯೀಕರಣ, ಪಶು ಮೇವು ಬೆಳೆಯುವಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಬಹುದು.  ಗ್ರಾಮಸಮಿತಿಗಳನ್ನು ರಚಿಸಿ ಇಂತಹ ಹೊಣೆಗಾರಿಕೆಯನ್ನು ವಹಿಸಿದಲ್ಲಿ ಅರಣ್ಯೀಕರಣ, ಅರಣ್ಯ ರಕ್ಷಣೆ, ಮೇವು ಬೆಳೆಯುವಿಕೆಯಂತಹ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂದು ಸಲಹೆ ನೀಡಿದರು.
ರಾಗಿಯನ್ನು ಹೆಚ್ಚಾಗಿ ಬೆಳೆಯುವಂತಹ ಭಾಗಗಳನ್ನು ಗುರುತಿಸಿ, ಎನ್.ಆರ್.ಎಲ್.ಎಂ. ಯೋಜನೆಯಡಿ ಸಂಸ್ಕರಣಾ ಘಟಕಗಳನ್ನು ತೆರೆಯಲು ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿ ನೆರವಾಗಲು ಕೃಷಿ ಇಲಾಖೆ ಮುಂದಾಗಬೇಕು. ಇಂತಹ ಸಂಸ್ಕರಣಾ ಘಟಕಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಲ್ಲರು. ಈ ಯೋಜನೆ ಪರಿಣಾಮಕಾರಿ ಅನುಷ್ಟಾನಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪರಿಶೀಲಿಸಿ: ಕಂದಾಯ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿರುವ ಭೂಮಿ ದತ್ತಾಂಶವನ್ನು (ಡಾಟಾಬೇಸ್) ಕೃಷಿ ಇಲಾಖೆ ಅಧಿಕಾರಿಗಳು ಪಡೆದು, ತಮ್ಮ  ಇಲಾಖೆಯಲ್ಲಿ ಸಿದ್ಧಪಡಿಸಿರುವ ತಾಲೂಕುವಾರು ರೈತರ ಮಾಹಿತಿ ಮತ್ತು ಕೃಷಿ ಭೂಮಿಯ  ವಿಸ್ತೀರ್ಣ ಕುರಿತ ದತ್ತಾಂಶ ಎರಡನ್ನೂ ಪರಿಶೀಲಿಸಬೇಕು.  ಇದರಿಂದಾಗಿ ಕೃಷಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಜಿಲ್ಲೆಯ ರೈತರ ಸಂಖ್ಯೆ, ಕೃಷಿ ಭೂಮಿ ವಿಸ್ತೀರ್ಣ, ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಬೆಳೆ ವಿವರಗಳ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುತ್ತದೆ.  ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಪ್ರದೇಶಕ್ಕೆ ಇಂತಹ ಬೆಳೆಯ ಬೀಜವನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಬೇಕು, ಎಷ್ಟು ಗೊಬ್ಬರವನ್ನು ವಿತರಿಸಬೇಕು ಎನ್ನುವ ಸ್ಪಷ್ಟ ಚಿತ್ರಣ ದೊರೆಯುವುದು ಎಂದು ಶಾಲಿನಿ ರಜನೀಶ್ ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಸಾರ್ವಜನಿಕರಿಂದ ರಸ್ತೆ ಆಗಿಲ್ಲ, ಕುಡಿಯುವ  ನೀರಿಲ್ಲ ಎಂಬ ದೂರುಗಳು ಬಾರದಂತೆ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ನಮ್ಮ ವೈಯಕ್ತಿಕ ಕೆಲಸಗಳನ್ನು ಎಷ್ಟು ಆಸಕ್ತಿ ವಹಿಸಿ ಮಾಡುತ್ತೇವೆಯೋ ಅಷ್ಟೇ ಶ್ರದ್ಧೆಯಿಂದ ಸರ್ಕಾರಿ ಕೆಲಸವನ್ನೂ ಸಹ ಅಧಿಕಾರಿಗಳು ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಪ್ರಸ್ತುತ 115 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಆದರೆ ಈವರೆಗೆ 45 ಮಿ.ಮಿ. ಮಳೆಯಾಗಿದೆ.  ಒಟ್ಟು 3855 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸ್ತುತ ವರ್ಷ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಸಂದರ್ಭ ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿ.ಪಂ. ಸಿ.ಇ.ಓ. ಗೋವಿಂದರಾಜು, ಉಪವಿಭಾಗಾಧಿಕಾರಿ ನಕುಲ್, ನಗರಸಭೆ ಪೌರಾಯುಕ್ತ ನಾರಾಯಣಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement