ಗುರು ಮಾರ್ಗದರ್ಶನದಲ್ಲಿ ಮುನ್ನಡೆದಾಗ ಸಾಧನೆ: ತಹಸೀಲ್ದಾರ್
ಕುಣಿಗಲ್: ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು - ಸಾವಿನ ನಡುವಿನ ಬವಣೆಯ ಬದುಕಿನಲ್ಲಿ ಸಾಧಿಸುವ ಛಲ ಮೈಗೂಡಿಸಿಕೊಂಡು, ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಅಸಾಧ್ಯವಾದುದನ್ನು ಸಾಧಿಸಬಹುದೆಂದು ತಹಸೀಲ್ದಾರ್ ಜಗದೀಶ್ ತಿಳಿಸಿದರು.
ಗುರುವಾರ ರಾತ್ರಿ, ತಾಲೂಕಿನ ಗೊಟ್ಟಿಕೆರೆಯಲ್ಲಿರುವ ಕುಣಿಗಲ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ದೊಡ್ಡಣ್ಣನಾದ ಅಮೆರಿಕಾ, ಭಾರತದಲ್ಲಿನ ನೈಸರ್ಗಿಕ ಸಂಪತ್ತಿಗಾಲಿ, ಸೇನಾ ಬಲಕ್ಕಾಗಲಿ ಹೆದರುವುದಿಲ್ಲ.
ಈ ದೇಶದಲ್ಲಿರುವ ವಿದ್ಯಾವಂತ ಹಾಗೂ ತಂತ್ರಜ್ಞಾನ ಪ್ರತಿಭೆಗಳಿಗೆ ಹೆದರುತ್ತಿದ್ದು, ಶಿಕ್ಷಣ ಕಲಿಕಾ ಪದ್ಧತಿ ಹಾಗೂ ಈ ಪದ್ಧತಿಯನ್ನು ಕಾಪಾಡಿಕೊಂಡು ಬಂದಿರುವ ಗುರು ಪರಂಪರೆಯ ಸತತ ಪರಿಶ್ರಮದಿಂದಲೇ ಇಂದು ಭಾರತ ಜಗತ್ತೇ ಬೆರಗಾಗುವ ಸಾಧನೆ ಮಾಡುತ್ತಿದೆ ಎಂದರು.
ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳ ಮುಂದೆ ಉನ್ನತ ವ್ಯಾಸಂಗಕ್ಕೆ ಹಲವು ಮಾರ್ಗಗಳಿದ್ದು, ಸತತ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಉತ್ತಮ ಯಶಸ್ಸು ಖಂಡಿತ ಸಾಧ್ಯ, ಹುಟ್ಟುವಾಗ ಹೆಸರಿರುವುದಿಲ್ಲ, ಹಾಗೆಯೆ ಸತ್ತಾಗ ಉಸಿರಿರುವುದಿಲ್ಲ, ಉಸಿರಿಲ್ಲದಿದ್ದರೇನಂತೆ ತಮ್ಮ ಜೀವಿತಾವಧಿಯಲ್ಲಿ ಹಲವು ಜನಪರ ಶಾಶ್ವತ ಕಾರ್ಯಕ್ರಮಗಳನ್ನು ಅಚ್ಚಳಿಯದೆ ಸಾಧಿಸಿ, ಇತರರಿಗೆ ಮಾರ್ಗದರ್ಶಕರಾಗಿ ಬಾಳಿಹೋದಾಗ, ಉಸಿರು ಹೋದರೂ ಹೆಸರು ಮಾತ್ರ ಅಜರಾಮರವಾಗಿರುತ್ತೆ.
ಇಂತಹ ಆದರ್ಶಪ್ರಾಯರಾಗಿ ಬಾಳುವ ಉತ್ತಮ ಆದರ್ಶಗಳನ್ನು ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಡಿಸಿ, ಸಾಧಿಸಿತೋರಬೇಕೆಂದರು.
ಸೂಕ್ತ ಕಾಳಜಿ ವಹಿಸಿ: ತಾಪಂ ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್, ಪೋಷಕರು ತಮ್ಮ ಮಕ್ಕಳನ್ನು ಕೇವಲ ಉತ್ತಮ ಶಾಲೆಗಳಲ್ಲಿ ಸೇರಿಸಿದ ಮಾತ್ರಕ್ಕೆ ತಮ್ಮ ಜವಾಬ್ದಾರಿ ಮುಗಿಯೆತೆನ್ನುವ ಮನೋಭಾವ ತೊರೆದು, ಮಕ್ಕಳ ಶೈಕ್ಷಣಿಕ ಪ್ರಗತಿಯ ಕಡೆ ಸೂಕ್ತ ಕಾಳಜಿ ವಹಿಸುವುದರ ಜೊತೆಯಲ್ಲಿ ಶೈಕ್ಷಣಿಕ, ಕ್ರೀಡೆ ಸೇರಿದಂತೆ ಎಲ್ಲಾ ಚಟುವಟಿಕೆಗಳಲ್ಲೂ ತಮ್ಮ ಮಕ್ಕಳು ಸಮಗ್ರ ಸಾಧನೆ ಮಾಡುವತ್ತ ಗಮನಹರಿಸುವ ಅವಶ್ಯಕತೆ ಹೆಚ್ಚಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಜಿ. ಲೋಕೇಶ್, ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ಪ್ರಗತಿಯ ಬಗ್ಗೆ ವಿವರಿಸಿದರು. ಶಾಲಾಡಳಿತ ಮಂಡಳಿಯ ಅಧ್ಯಕ್ಷ ಡಾ.ಕುಮಾರ್, ಸುಧಾಕುಮಾರ್, ಕಾರ್ಯದರ್ಶಿ ಪ್ರಭಾಕರ್, ಪ್ರಾಚಾರ್ಯ ಎ.ಖಾನ್, ಶೈಕ್ಷಣಿಕ ಸಲಹೆಗಾರ ಶಿವಮೂರ್ತಿ, ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ್, ವೈಷ್ಣವಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿಠಲರಾವ್, ಪುರಸಭೆ ಮಾಜಿ ಅಧ್ಯಕ್ಷ , ಸದಸ್ಯ ಕೆ.ಎಲ್.ಹರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೌರವಿಸಲಾಯಿತು.