ಡೋಂಗಿ, ಕಪಟ ಸನ್ಯಾಸಿಗಳನ್ನು ನಂಬಬೇಡಿ
ಕನ್ನಡಪ್ರಭ ವಾರ್ತೆ, ತುಮಕೂರು , ಮೇ 17
ಡೋಂಗಿ ಹಾಗೂ ಕಪಟ ಸನ್ಯಾಸಿಗಳನ್ನು ನಂಬಬೇಡಿ ಎಂದು ಕರ್ನಾಟಕ ವಿಜ್ಞಾನ ಕೇಂದ್ರದ ನಿತ್ಯಾನಂದ ಟಿ.ಎಸ್. ಸಲಹೆ ನೀಡಿದರು.
ಅವರು ಇಲ್ಲಿನ ಹೇಮಾದ್ರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಜವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಶಿಬಿರದಲ್ಲಿ ಪವಾಡಗಳ ರಹಸ್ಯ ಬಯಲು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿ ಮಾತನಾಡಿದರು.
ದೆವ್ವ, ಭೂತ ಎಂಬ ಮೂಢನಂಬಿಕೆಗಳು ಭ್ರಮೆಯಿಂದ ಕೂಡಿರುತ್ತದೆ. ಅವುಗಳು ಸತ್ಯವಾಗಿರುವುದಿಲ್ಲ ಎಂದು ತಿಳಿಸುತ್ತಾ ಡೊಂಗಿ ಸನ್ಯಾಸಿಗಳು, ಕಪಟ ಸನ್ಯಾಸಿಗಳು ಹಣವನ್ನು ಸಂಪಾದಿಸುವುದಕ್ಕೋಸ್ಕರ ನಾನಾ ರೀತಿಯ ಪವಾಡಗಳನ್ನು ಮಾಡುವುದರ ಮೂಲಕ ಜನರನ್ನು ವಂಚಿಸುತ್ತಾರೆ ಎಂದರು
ಅವರು ನಡೆಸುವ ಪವಾಡವನ್ನು ಪ್ರಯೋಗಿಕವಾಗಿ ಗ್ರಾಮಸ್ಥರ ಮುಂದೆ ಪ್ರಸ್ತುತಪಡಿಸಿದರು.
ಇದರಲ್ಲಿ ಅವರು ದೃಷ್ಟಿಯ ಭ್ರಮೆ, ಶ್ರವಣ ಭ್ರಮೆ ಮತ್ತು ಚರ್ಮವನ್ನು ಸೂಜಿಯ ಮೂಲಕ ಹೊಲೆಯುವುದು, ತಲೆಯ ಮೇಲೆ ಬೆಂಕಿಯನ್ನು ಉರಿಸುವುದು, ದೃಷ್ಟಿಯ ಮೂಲಕ ಬೆಂಕಿಯನ್ನು ಉರಿಸುವುದು, ಭಾರವಾದ ವ್ಯಕ್ತಿಯನ್ನು,
ಬೆರಳುಗಳ ಮೂಲಕ ಎತ್ತುವುದು, ಪತ್ರದಲ್ಲಿ ಬರೆದು ಮಾಹಿತಿಯನ್ನು ನೋಡದೆ ಹೇಳುವುದು, ಮರಣ ಹೊಂದಿದವರಿಗೆ ನೀರನ್ನು ತಲುಪಿಸುವುದು ಇಂತಹ ಪವಾಡವನ್ನು ಅವರು ಬಯಲು ಮಾಡಿದರು.
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು. ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವನೇಗೌಡರು ಮಾತನಾಡಿ ಹಳ್ಳಿ-ಗ್ರಾಮಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರಿಂದ ಜನರಿಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಶಿಬಿರಾರ್ಥಿ ಪ್ರಸನ್ನ ನಿರೂಪಿಸಿದರು. ನಂದಿನಿ ಪ್ರಾರ್ಥಿಸಿದರು. ವಿದ್ಯಾ ಸ್ವಾಗತಿಸಿ ಮಂಜುನಾಥ್ ವಂದಿಸಿದರು.
ಉದಯಶಂಕರ್, ತಿಪ್ಪೇಸ್ವಾಮಿ ಜೆ.ಸಿ. ರಾಜಣ್ಣ, ಜಗನ್ನಾಥ್, ಶಿವಣ್ಣ , ತಿಮ್ಮರಾಯಪ್ಪ, ರಮೇಶ್, ಗೋವಿಂದಪ್ಪ, ನಾಗರಾಜು, ಕಾಂತರಾಜು ಭಾಗವಹಿಸಿದ್ದರು. ಶಿಬಿರಾಧಿಕಾರಿ ನಿಸರ್ಗಪ್ರಿಯಾ, ಎಚ್.ಐ.ಎಮ್.ಎಸ್. ಕಾಲೇಜಿನ ಪ್ರಾಂಶುಪಾಲ ಬಿ.ಕೆ. ನಟರಾಜು ಅವರು, ಊರಿನ ಇತರೆ ಮುಖ್ಯಸ್ಥರು, ಗ್ರಾಮಸ್ಥರು ಭಾಗವಹಿಸಿದ್ದರು.