ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೊಡ್ಡ ಜಿಲ್ಲೆಗೆ ಒಬ್ಬರೇ ಸಚಿವರು ಸಾಕೇ?

Vishwanath S
Updated On : 17 May 2013, 11:12 am

ತುಮಕೂರು: 11 ವಿಧಾನಸಭಾ ಕ್ಷೇತ್ರ, 54 ಜಿ.ಪಂ. ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಜಿಲ್ಲೆಗೆ ಕೇವಲ 1 ಸಚಿವ ಸ್ಥಾನ ನೀಡಿರುವುದು ಎಷ್ಟು ಸರಿ ಎಂಬ ಚರ್ಚೆ ಆರಂಭವಾಗಿದೆ.
ಈ ಬಾರಿ ಕನಿಷ್ಠ 2 ರಿಂದ 3 ಮಂದಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರಿಗೆ ಮಾತ್ರ ಸಿಕ್ಕಿದೆ.
ತಿಪಟೂರು ಗಡಿ ಭಾಗದಿಂದ ಪಾವಗಡಕ್ಕೆ ಸುಮಾರು 175 ಕಿ.ಮೀ. ದೂರವಿದೆ. ತುಮಕೂರು ಜಿಲ್ಲಾ ಕೇಂದ್ರದಿಂದ ಪಾವಗಡಕ್ಕೆ ಸುಮಾರು 100 ಕಿಮೀ. ಅಂತರವಿದೆ. ನಂಜುಂಡಪ್ಪ ವರದಿ ಪ್ರಕಾರ 4 ಹಿಂದುಳಿದ ತಾಲೂಕುಗಳು ಇವೆ.
 3 ಲೋಕಸಭಾ ಕ್ಷೇತ್ರವನ್ನು ತುಮಕೂರು ಜಿಲ್ಲೆಯ ತಾಲೂಕುಗಳು ಒಳಗೊಂಡಿದೆ. ಇಷ್ಟೆಲ್ಲಾ ಇದ್ದರೂ ತುಮಕೂರಿಗೆ ಸಿಗುತ್ತಿರುವುದು ಕೇವಲ 1 ಸಚಿವ ಸ್ಥಾನ.
ಈ ಹಿಂದೆ ತುಮಕೂರು ಜಿಲ್ಲೆಗೆ 3 ಸಚಿವರನ್ನು ನೇಮಿಸಲಾಗಿತ್ತು. ಕಳೆದ ಬಾರಿ ಮೊದಲು ವೆಂಕಟರಮಣಪ್ಪ ಆಗಿದ್ದರು. ನಂತರ ಸೊಗಡು ಶಿವಣ್ಣ ಸಚಿವರಾದರು. ಒಟ್ಟಿಗೆ ಇಬ್ಬರನ್ನು ಕೂಡ ಸಚಿವರನ್ನಾಗಿ ನೇಮಿಸಿಲ್ಲ.  ಈಗಾಗಲೇ ತುಮಕೂರು ಜಿಲ್ಲೆ ಸಾಕಷ್ಟು ಬೆಳೆದಿದೆ. 10 ತಾಲೂಕುಗಳನ್ನು ಒಬ್ಬರೇ ಸಚಿವರು ನಿಭಾಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕನಿಷ್ಟ ಎರಡು ಸಚಿವರನ್ನಾದರೂ ನೇಮಿಸಬೇಕು ಎಂಬುದು ರಾಜಕೀಯ ನೇತಾರರ ಅಭಿಪ್ರಾಯವಾಗಿದೆ.
ಮಹತ್ವ ಪಡೆದಿದೆ: ಮುಂದೆ ಇನ್ನು ಒಂದು ಕಂತು ಸಂಪುಟ ವಿಸರಣೆಯಲ್ಲಾದರು ತುಮಕೂರಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ, ಭೌಗೋಳಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ.
ತುಮಕೂರಿನಲ್ಲಿ ವಿಶ್ವವಿದ್ಯಾಲಯವಿದೆ. ಬೆಂಗಳೂರಿಗೆ ಸುಮಾರು 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ತುಮಕೂರು ಎಂದೇ ಖ್ಯಾತಿ ಗಳಿಸಿದೆ. ಆರ್ಥಿಕವಾಗಿಯೂ ಸಾಕಷ್ಟು ಬಲಾಢ್ಯವಾಗಿದೆ. ಎಲ್ಲಕ್ಕೂ ಮಿಗಿಲಾಗಿ ದೊಡ್ಡ ಜಿಲ್ಲೆಯಾಗಿರುವ ತುಮಕೂರಿಗೆ ಇನ್ನೊಬ್ಬ ಸಚಿವರನ್ನು ನೇಮಿಸಬೇಕಾಗಿದೆ.
ಜನರ ಬೇಡಿಕೆ: ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳಲ್ಲಿ ಗೆದ್ದಿದೆ. ಪರಮೇಶ್ವರ್ ಕೂಡ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದಾರೆ.  ಈಗಾಗಲೇ ಎರಡನೇ ಬಾರಿ ಶಾಸಕರಾಗಿ ಒಮ್ಮೆ ವಿಧಾನ ಪರಿಷತ್ ಸದಸ್ಯರಾಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಿಂದುಳಿದ ಜನಾಂಗದವರಾದ ಕೆ.ಎನ್. ರಾಜಣ್ಣ ಇದ್ದಾರೆ. ವೀರಶೈವ ಮುಖಂಡರೂ ಎರಡು ಬಾರಿ ಶಾಸಕರಾಗಿ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಸಿಕೊಂಡಿರುವ ತಿಪಟೂರಿನ ಕೆ. ಷಡಕ್ಷರಿ ಇದ್ದಾರೆ.  ಜತೆಗೆ ಮುಸ್ಲಿಂ ಜನಾಂಗಕ್ಕೆ ಸೇರಿದ ತುಮಕೂರು ನಗರ ಶಾಸಕ ರಫೀಕ್ ಅಹಮದ್ ಇದ್ದಾರೆ. ಹೀಗಾಗಿ ಇವರಲ್ಲಿ ಜೇಷ್ಠತೆ ಆಧಾರದ ಮೇಲೆ ಯಾರೊಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂಬುದು ಜನರ ಬೇಡಿಕೆಯಾಗಿದೆ.
ಸಣ್ಣ ಸಣ್ಣ ಜಿಲ್ಲೆಗೂ 2 ಸಚಿವ ಸ್ಥಾನ ನೀಡಿರುವುದರಿಂದ ತುಮಕೂರಿಗೂ ಇನ್ನೊಂದು ಸಚಿವ ಸ್ಥಾನ ಕೊಟ್ಟಿದ್ದರೂ ಅನುಕೂಲವಾಗುತ್ತಿತ್ತು ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳು. ಇನ್ನೊಂದು ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ತುಮಕೂರಿಗೆ ಆದ್ಯತೆ ನೀಡಬೇಕು ಎಂಬುದು ರಾಜಕೀಯ ನೇತಾರರ ಹಾಗೂ ಜನರ ನಿರೀಕ್ಷೆಯಾಗಿದೆ.

-ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement