'ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ'
ಕ.ಪ್ರ. ವಾರ್ತೆ , ತುಮಕೂರು , ಮೇ 20
ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಬದುಕಿನಲ್ಲಿ ಚುಟುಕು ಸಾಹಿತ್ಯ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ನಾಲ್ಕು ಸಾಲುಗಳು ಬದುಕಿನ ಸಾರವನ್ನೇ ಅರಹುತ್ತದೆ. ನಿತ್ಯ ಬದುಕಿಗೆ ಚುಟುಕುಗಳು ಲಾಲಿತ್ಯ ನೀಡುತ್ತವೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಕೆ. ಕುಲಕರ್ಣಿ ಅವರು ಚುಟುಕು ಸಾಹಿತ್ಯದ ಮೂಲ ಸಂಸ್ಕೃತ ಭಾಷೆ ಎಂದು ಹೇಳುತ್ತಾ ಅನೇಕ ಸಂಸ್ಕೃತ ಶ್ಲೋಕಗಳನ್ನು ಉದಾಹರಿಸಿದರು. ತುಮಕೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ಕೊಡ್ಲಿ ಅವರು ಚುಟುಕು ಸಾಹಿತ್ಯದ ನೆಲೆ-ಬೆಲೆಯನ್ನು ವಿಸ್ತಾರವಾಗಿ ಬಣ್ಣಿಸಿದರು.
ಚುಟುಕುಗಳನ್ನು ಚಿಂತನಶೀಲರನ್ನಾಗಿಸುತ್ತವೆ. ಕುತೂಹಲ ಕೆರಳಿಸುತ್ತವೆ. ವಿಚಾರ ಪ್ರಚೋದಕವೂ ಆಗಿರುತ್ತದೆ ಎಂದರು. 101 ಕ್ಕೂ ಹೆಚ್ಚು ಕವಿಗಳು ಚುಟುಕುಗಳನ್ನು ವಾಚಿಸಿದರು. ಸಂಧ್ಯಾ ಪ್ರಾರ್ಥಿಸಿದರು. ಬಿಂಬಕುಮಾರ ಸ್ವಾಗತಿಸಿದರು. ಕಮಲಾ ಬಡ್ಡಿಹಳ್ಳಿ ವಂದಿಸಿದರು. ಪದ್ಮಾಕೃಷ್ಣಮೂರ್ತಿ ನಿರೂಪಿಸಿದರು.