ಬಿರುಗಾಳಿ ಸಮೇತ ಆಲಿಕಲ್ಲಿನ ಮಳೆ
ಕ.ಪ್ರ. ವಾರ್ತೆ , ಕುಣಿಗಲ್ , ಮೇ 20
ಭಾನುವಾರ ರಾತ್ರಿ ಬಿರುಗಾಳಿ ಸಮೇತ, ಆಲಿಕಲ್ಲಿನಿಂದ ಕೂಡಿದ ಮಳೆಗೆ ಪಟ್ಟಣದ 23ನೇ ವಾರ್ಡ್ನಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೆಲ ಮರಗಳು ಧರೆಗುರುಳಿವೆ. ಮರವೊಂದು ಮನೆಯ ಮೇಲೆ ಬಿದ್ದು ಮನೆಯ ಛಾವಣಿ ಜಖಂಗೊಂಡಿರುವ ಘಟನೆ ನಡೆದಿದೆ.
ಭಾನುವಾರ, ರಾತ್ರಿ 9ಗಂಟೆ ಸುಮಾರಿಗೆ ಭಾರೀ ಬಿರುಗಾಳಿ ಬೀಸತೊಡಗಿತು. ನಾಗರಿಕರು ಗಾಬರಿಗೊಳ್ಳುವಂತಾಯಿತು. ಗುಡುಗು, ಸಿಡಿಲಿನ ಆರ್ಭಟದಿಂದ ಕೂಡಿದ ಆಲಿಕಲ್ಲಿನ ಮಳೆ ಪ್ರಾರಂಭವಾಯಿತು. ಬಿರುಗಾಳಿಯ ರಭಸಕ್ಕೆ 23ನೇ ವಾರ್ಡ್ನ ಮುದ್ದುರಂಗಯ್ಯನಮನೆ ಬೀದಿಯಲ್ಲೇ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ಬಿದಿದ್ದು, ಪುಟ್ಟರಂಗಯ್ಯ ಎಂಬುವವರಿಗೆ ಸೇರಿದ, ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಮೇಲೆ ವಿದ್ಯುತ್ ಕಂಬ ಬಿದ್ದು ಆಟೋ ಜಖಂಗೊಂಡಿದೆ.
ವೀರಭದ್ರೇಶ್ವರ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಲ್ಲಿ ಗುಪ್ತಾ ಎಂಬುವವರ ಮನೆಯ ಮೇಲೆ, ಟೀಕ್ವುಡ್ ಮರ ಬುಡಸಮೇತ ವಾಲಿದ್ದು, ಬೆಸ್ಕಾಂ ವೈರ್ಗಳ ಮೇಲೆ ಮರ ವಾಲಿದ್ದರ ಪರಿಣಾಮ ಮನೆಗೆ ಸ್ವಲ್ಪ ಪ್ರಮಾಣದ ಜಖಂ ಆಗಿದೆ. ಹಳೇ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಅಡ್ಡಲಾಗಿ ಎಳೆಯಲಾಗಿದ್ದ ಪ್ರೈಮರಿ ಲೈನ್ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಕಂಬಗಳು ಕೆಳಗೆ ಬಿದ್ದಾಗ ಮುಖ್ಯರಸ್ತೆಗೆ ವೈರ್ಗಳು ಹರಡಿಕೊಂಡವು. ಕೆಲವೆ ಕ್ಷಣದ ಅಂತರದಲ್ಲಿ ಹಾಸನ-ಬೆಂಗಳೂರು ಸಾರಿಗೆ ಸಂಸ್ಥೆ ಬಸ್ ಈ ಮಾರ್ಗದ ಮೂಲಕ ಹಾದುಹೋಗಿ, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
23ನೇ ವಾರ್ಡ್ಗೆ ಹೊಂದಿಕೊಂಡಿರುವ ಕುಣಿಗಲ್ ಬಾಗಾಯ್ತು ಗದ್ದೆ ಪ್ರದೇಶದಲ್ಲಿ, ಬೋರ್ವೆಲ್ ನೀರಿನ ಆಶ್ರಯದಲ್ಲಿ ರಂಗಪ್ಪ ಎಂಬುವವರು ಎರಡೂವರೆ ಎಕರೆಯಲ್ಲಿ ಬತ್ತ ಬೆಳೆದಿದ್ದು, ಕೊಯ್ಲಿಗೆ ಬಂದ ಬತ್ತ, ಗಾಳಿ, ಮಳೆಯ ಅಬ್ಬರಕ್ಕೆ ಸಿಲುಕಿ ಎರಡು ಎಕರೆ ಬತ್ತ ಸಂಪೂರ್ಣ ನೆಲಕಚ್ಚಿದೆ. ರಸ್ತೆ ಬದಿಯ ಬಹುತೇಕ ಮರಗಳ ಕೊಂಬೆಗಳು ಬಿದಿದ್ದು, ಬಿರುಗಾಳಿಯ ಪ್ರಭಾವ ಸಾರಿ ಹೇಳುವಂತಿತ್ತು.
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಇನ್ನು 23ನೇ ವಾರ್ಡ್ನ ಉದಯರವಿ ರಸ್ತೆಯಲ್ಲಿನ ಗಣೇಶ್ ಎಂಬುವವರ ಮನೆ ಮೇಲೆ, ಮರದ ಕೊಂಬೆ ಮುರಿದು ಬಿದ್ದು, ಮನೆಯ ಮೇಲ್ಚಾವಣಿಯ ಹೆಂಚು, ತೊಲೆಗಳು, ಸಂಪೂರ್ಣ ಹಾನಿಗೊಂಡು, ಮನೆಯ ಗೊಡೆ ಬಿರುಕು ಬಿಟ್ಟು ಸುಮಾರು ಮೂರು ಲಕ್ಷ ರು. ಮೌಲ್ಯದ ನಷ್ಟ ಸಂಭವಿಸಿದೆ.
ಸದರಿ ಮನೆಯ ಮುಂಭಾಗದಲ್ಲಿನ ಖಾಲಿ ನಿವೇಶನದಲ್ಲಿನ ರೈಟರ್ ಮರ ಶಿಥಿಲಗೊಂಡಿದ್ದು, ಈ ಮರದಿಂದ ಅಕ್ಕಪಕ್ಕದ ಮನೆಯವರಿಗೆ ಪ್ರಾಣಹಾನಿ ಸಂಭವಿಸುವ ಮುನ್ನ ಮರವನ್ನು ತೆರವುಗೊಳಿಸಿ ಸಾರ್ವಜನಿಕರ ಪ್ರಾಣ, ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಈ ಭಾಗದ ನಿವಾಸಿಗಳು, ಪುರಸಭೆ ಮುಖ್ಯಾಧಿಕಾರಿ, ವಲಯ ಅರಣ್ಯ ಅಧಿಕಾರಿ ಹುಲಿಯೂರುದುರ್ಗ, ಇವರಿಗೆ 2012ರಲ್ಲೆ ದೂರು ನೀಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದು, ಇದೇ ಇಂದು ಮನೆಜಖಂಗೆ ಕಾರಣವಾಗಿದೆ ಎಂದು ಮನೆಯವರು ಆರೋಪಿಸಿದರು. ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಖಂಡನೀಯ: ಈ ಭಾಗದ ನೂತನ ಪುರಸಭಾ ಸದಸ್ಯ, ಕೆ.ಎಲ್.ಹರೀಶ್, ಅಧಿಕಾರಿಗಳ ನಿರ್ಲಕ್ಷ್ಯ ನಿಜಕ್ಕೂ ಖಂಡನೀಯ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೂ, ರಾತ್ರಿಯಿಡಿ ಕುಟುಂಬ, ಪ್ರಾಣಭೀತಿಯಿಂದ ಕಾಲಕಳೆದಿರುವುದು ನಿಜಕ್ಕೂ ವ್ಯವಸ್ಥೆಯಲ್ಲಿನ ದೋಷ ಎತ್ತಿ ತೋರಿಸುತ್ತದೆ. ಈಗ ಆಗಿರುವ ಹಾನಿಗೆ ಅಧಿಕಾರಿಗಳ ಕರ್ತವ್ಯಲೋಪವೇ ನೇರ ಕಾರಣವಾಗಿದ್ದು, ಮುಂದಿನ ದಿನಗಳಲ್ಲಾದರೂ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಿ ಕರ್ತವ್ಯ ಬದ್ಧತೆ ಮೆರೆಯಬೇಕಿದೆ ಎಂದಿದ್ದಾರೆ.