ಮಾನವೀಯತೆ ಮೈಗೂಡಿಸಿಕೊಳ್ಳಿ, ಕರ್ತವ್ಯ ನಿರ್ವಹಿಸಿ
ಕ.ಪ್ರ.ವಾರ್ತೆ , ತುಮಕೂರು , ಮೇ 20
ಮನುಕುಲಕ್ಕೆ ಒಂದು ಸಾಮೂಹಿಕ ವ್ಯಕ್ತಿತ್ವವಿದೆ. ಅದುವೇ ಮಾನವೀಯ ವ್ಯಕ್ತಿತ್ವ. ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಮಾನವೀಯತೆಯ ಅಂಶವನ್ನಿಟ್ಟುಕೊಂಡು ಕರ್ತವ್ಯ ನಿರ್ವಹಿಸಿದಲ್ಲಿ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಸದಸ್ಯ ಹುನಗುಂದ್ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಗುಲಾಮಗಿರಿ ನಿರ್ಮೂಲನೆ, ಆರೋಗ್ಯ, ಧರ್ಮ ಸ್ವಾತಂತ್ರ್ಯ, ಅಭಿವ್ಯಕ್ತಿ, ಶಿಕ್ಷಣ, ಸಂಚರಿಸುವ, ವಾಸಿಸುವ, ಜೀವಿಸುವ, ಪ್ರಾಣ ರಕ್ಷಿಸುವ ಇತ್ಯಾದಿ ಹಕ್ಕುಗಳನ್ನು ಆಯೋಗವು ಗುರುತಿಸಿದ್ದು, ಈ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ
ಜವಾಬ್ದಾರಿ ಎಂದರು.
1247 ಪ್ರಕರಣಗಳನ್ನು ಇತ್ಯರ್ಥ: ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 2217 ದೂರುಗಳು ಆಯೋಗದಲ್ಲಿ ದಾಖಲಾಗಿದ್ದು, ಈ ಪೈಕಿ 1247 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ 970 ಪ್ರಕರಣಗಳು ಇತ್ಯರ್ಥಗೊಳಿಸಲಾಗುವುದು. ದಾಖಲಾದ ದೂರುಗಳ ಪೈಕಿ ಶೇ.60ರಷ್ಟು ದೂರುಗಳು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳಾಗಿದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರಿನ ತೀವ್ರತೆ ಕಡಿಮೆಗೊಳಿಸಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.
ವ್ಯಾಪಕ ದೂರು: ಪೊಲೀಸ್ ಇಲಾಖೆಯಲ್ಲಿ ಪ್ರಮುಖವಾಗಿ ದೂರು ಸ್ವೀಕರಿಸದಿರುವ ಬಗ್ಗೆ ಹಾಗೂ ಅಕ್ರಮ ಬಂಧನದಲ್ಲಿಟ್ಟು ದೌರ್ಜನ್ಯ ನಡೆಸುವ ಕುರಿತಂತೆ ವ್ಯಾಪಕ ದೂರುಗಳು ದಾಖಲಾಗುತ್ತಿವೆ. ಪೊಲೀಸರು ದೂರು ಸ್ವೀಕಾರ ಮತ್ತು ಬಂಧನ ಕುರಿತಂತೆ ಸರಿಯಾದ ಕ್ರಮ ಅನುಸರಿಸಿ, ಟಿಪ್ಪಣಿ ಸಿದ್ದಪಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಹಾಗೂ ಸ್ನೇಹಮಯ ವಾತಾವರಣ ಪೊಲೀಸ್ ಠಾಣೆಯಲ್ಲಿ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುತೇಕ ಪ್ರಕರಣಗಳಲ್ಲಿ ಪೂರ್ವಾಗ್ರಹ ಪೀಡಿತರಾಗಿ ಮತ್ತು ವಿಚಾರಣೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಹಿತಾಸಕ್ತಿಯಿಂದ ದೂರುಗಳನ್ನು ಆಯೋಗಕ್ಕೆ ಸಲ್ಲಿಸಲಾಗುತ್ತಿದೆ.
ಆದರೂ ಸಹ ಈ ಬಗ್ಗೆ ತಾವು ಮತ್ತಷ್ಟು ಎಚ್ಚರವಹಿಸಿ, ಅಕ್ರಮ ಬಂಧನ ಮತ್ತು ದೌರ್ಜನ್ಯ ನಿಯಂತ್ರಿಸಿ ಸ್ನೇಹಮಯಿ ವಾತಾವರಣ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಾಕಷ್ಟು ದೂರು: ಅಂಗನವಾಡಿ ಕೇಂದ್ರಗಳ ಶೋಚನೀಯ ಸ್ಥಿತಿಗಳ ಬಗ್ಗೆ ಸಾಕಷ್ಟು ದೂರುಗಳು ಆಯೋಗಕ್ಕೆ ಬರುತ್ತಿದೆ. ಆಯೋಗ ಸಹ ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಾಕಷ್ಟು ಪತ್ರ ವ್ಯವಹಾರ ನಡೆಸಿದೆ. ಅಂಗನವಾಡಿ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ಕೈಗೊಳ್ಳಬಹುದಾದ ಕ್ರಮ ಕುರಿತು ತಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಬರುವ ಗ್ರಾಮೀಣ ಮಹಿಳೆಯರಿಗೆ ಲಿಂಗ ತಾರತಮ್ಯದಿಂದ ಗಂಡು ಹೆಣ್ಣಿನ ಅನುಪಾತ ಹೆಚ್ಚು ಕಡಿಮೆಯಾಗುತ್ತಿರುವ ಬಗ್ಗೆ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ರಸ್ತೆ, ಚರಂಡಿ, ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ ಕುರಿತಂತೆ ಬಹುತೇಕ ದೂರುಗಳು ನಗರಸಭೆ, ಪಟ್ಟಣ ಪಂಚಾಯತಿಗೆ ಸಂಬಂಧಿಸಿದಂತೆ ದಾಖಲಾಗುತ್ತಿದ್ದು, ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳು, ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ತಿಳಿಸಿದರು.
ಸುಸ್ಥಿತಿ ಅಗತ್ಯ: ಜಿಲ್ಲಾ ಕಾರಾಗೃಹದಲ್ಲಿ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು, ಖೈದಿಗಳಿಗೆ ಆರೋಗ್ಯ, ನೈರ್ಮಲ್ಯ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹುನಗುಂದ್ ಅವರು ಕಾರಾಗೃಹ ಅಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಕಾರಾಗೃಹ ಅಧಿಕಾರಿ, ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 300 ಪುರುಷ ಕೈದಿಗಳ ಕೊಠಡಿ ಹಾಗೂ 40 ಮಹಿಳಾ ಕೈದಿಗಳ ಕೊಠಡಿ ಇದ್ದು, ಪಿ.ಡಬ್ಲ್ಯೂ.ಡಿ. ಇಲಾಖೆಯ ಅಂದಾಜುಪಟ್ಟಿ ಪ್ರಕಾರ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. 35 ಲಕ್ಷ ರು. ಬಿಡುಗಡೆಯಾಗಿದೆ. ಉಳಿದಂತೆ ಕಾರಾಗೃಹದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು, ಕಂದಾಯ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ, ಮಾನವೀಯ ಅಂಶಗಳನ್ನು ಇಟ್ಟುಕೊಂಡು ಕರ್ತವ್ಯ ನಿರ್ವಹಿಸುವ ಮನಸ್ಥಿತಿ ನಿರ್ಮಾಣ ಮಾಡುವ ಮೂಲಕ, ಆಯೋಗದಲ್ಲಿ ದಾಖಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ತೀವ್ರತೆಯನ್ನು ಕಡಿಮೆ ಮಾಡಲು ತಾವು ಶ್ರಮಿಸುವುದಾಗಿ ಈ ಸಂದರ್ಭ ಭರವಸೆ ನೀಡಿದರು.
ಕೊಳವೆಬಾವಿ: ಈ ಸಂದರ್ಭ ಮಾತನಾಡಿದ ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು, ಜಿಲ್ಲೆಯಲ್ಲಿ 14 ಸಾವಿರ ಕುಡಿಯುವ ನೀರಿನ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಕಳೆದ 2 ವರ್ಷದಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಕಾರಣ ಅಂತರ್ಜಲಮಟ್ಟ ಕುಸಿದಿದ್ದು, 900 ಅಡಿ ಆಳದವರೆಗೆ ಬೋರ್ವೆಲ್ಗಳನ್ನು ಕೊರೆಯಲಾಗುತ್ತಿದೆ. ಹೆಚ್ಚು ಆಳ ಕೊರೆದಂತೆ ಪ್ಲೋರೈಡ್ ಅಂಶದ ತೀವ್ರತೆ ಹೆಚ್ಚುತ್ತದೆ. ಜಿಲ್ಲೆಯ ಮಧುಗಿರಿ ಹಾಗೂ ಪಾವಗಡ ಭಾಗಗಳಲ್ಲಿ 117 ಡಿ.ಪ್ಲೋರೈಡ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ ಎಂದು ಸಭೆಗೆ ವಿವರಿಸಿದರು.
ಮಾನವ ಹಕ್ಕುಗಳ ಆಯೋಗದ ಇನ್ಸ್ಸ್ಪೆಕ್ಟರ್ ಜನರಲ್ ಸುನೀಲ್ ಅಗರ್ವಾಲ್, ಆಯೋಗದ ರಿಜಿಸ್ಚ್ರಾರ್ ಮಲ್ಲೇಶಪ್ಪ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.