ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಚಿವ ಸ್ಥಾನ; ಅಭಿನಂದನೆ

Vishwanath S
Updated On : 20 May 2013, 11:07 am

ತಿಪಟೂರು: ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ತುಂಬಾ ಹಿಂದುಳಿದಿರುವ ಲಂಬಾಣಿ ಸಮಾಜವನ್ನು ಗುರುತಿಸಿ ಲಂಬಾಣಿ ಜನಾಂಗದ ಪರಮೇಶ್ವರ ನಾಯ್ಕರವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಕಾರ್ಮಿಕ ಖಾತೆ ನೀಡಿರುವುದಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾಗಾಂಧಿ, ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯರಿಗೆ ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಪರವಾಗಿ ತಾಲೂಕು ಅಧ್ಯಕ್ಷ ಬಿ.ಟಿ.ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.      

ಹಾಸ್ಟೆಲ್‌ಗಳಿಗೆ ಅರ್ಜಿ ಆಹ್ವಾನ
ತಿಪಟೂರು: ತಾಲೂಕು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ಬಾಲಕ ಮತ್ತು ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ 2013-14ನೇ ಸಾಲಿನಲ್ಲಿ ಸೇರ ಬಯಸುವ ಪರಿಶಿಷ್ಟ ಜಾತಿ, ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜೂ.5 ಅರ್ಜಿ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ತಿಪಟೂರು ನಗರ, ಹೊನ್ನವಳ್ಳಿಯಲ್ಲಿರುವ ಪ್ರಿ-ಮೆಟ್ರಿಕ್ ಬಾಲಕರ ವಿದ್ಯಾರ್ಥಿನಿಲಯ ಹಾಗೂ ನೊಣವಿನಕೆರೆ,ತಿಪಟೂರು ನಗರದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು ಸಂಬಂಧಿಸಿದ ವಿದ್ಯಾರ್ಥಿನಿಲಯಗಳಲ್ಲಿ, ಕಚೇರಿ ವೇಳೆಯಲ್ಲಿ ಉಚಿತವಾಗಿ ಪಡೆಯಬಹುದು. ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ತಿಂಡಿ, ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು. ಅರ್ಜಿಯೊಂದಿಗೆ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳು ತಹಸೀಲ್ದಾರ್‌ರಿಂದ ಜಾತಿ ಪತ್ರ ಪಡೆದು ಜೆರಾಕ್ಸ್ ಪ್ರತಿಯನ್ನು ಹಾಗೂ ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಬೇಕೆಂದು ತಿಳಿಸಿದ್ದಾರೆ.

ಕುಂಬಾರರ ಹಾಸ್ಟೆಲ್‌ಗೆ ಆಹ್ವಾನ
ತುಮಕೂರು: ಜಿಲ್ಲಾ ಕುಂಬಾರರ ಸಂಘದ ಹಾಸ್ಟೆಲ್ ಸಮಿತಿಯು 2013-14ನೇ ಸಾಲಿಗೆ ಪಿಯುಸಿ ಹಾಗೂ ಮೇಲ್ಪಟ್ಟ ಉನ್ನತ ಶಿಕ್ಷಣ ಸೇರಲಿರುವ ಕುಂಬಾರ ಜನಾಂಗದ ಹಾಗೂ ಸಾರ್ವಜನಿಕ ವಿದ್ಯಾರ್ಥಿಗಳಿಂದ ಊಟ, ವಸತಿಯುತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಕರೆಯಲಾಗಿದೆ. ಜಿಲ್ಲಾ ಕುಂಬಾರರ ಸಂಘದ ಕಟ್ಟಡ,  ಹೋಂಡಾ ಶೋ ರೂಂ ಎದುರು, ಸಿದ್ಧಗಂಗಾ ಬಡಾವಣೆ, ಬಿ.ಹೆಚ್. ರಸ್ತೆ, ತುಮಕೂರು, ಮೊ.9448718500, 9741854761 ಸಂಪರ್ಕಿಸಿ.

ಚಾಮುಂಡೇಶ್ವರಿ  ರಥೋತ್ಸವ
ತಿಪಟೂರು: ತಾಲೂಕಿನ ತಡಸೂರು ಗ್ರಾಮದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಶಾಸಕ ಕೆ.ಷಡಕ್ಷರಿ, ಲೋಕೇಶ್ವರ, ತಾ.ಜೆಡಿಎಸ್ ಅಧ್ಯಕ್ಷ ಗುರುಮೂರ್ತಿ, ಅನೇಕರಿದ್ದರು.

ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ
ಶಿರಾ: ಡಾ.ಎಂ.ಸಿ. ಮೋದಿ ಚಾರಿಟಬಲ್ ಕಣ್ಣಿನ ಆಸ್ಪತ್ರೆ ಮತ್ತು ಕಳ್ಳಂಬೆಳ್ಳ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನೇತ್ರ ಉಚಿತ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಮೇ 24ರ ಶುಕ್ರವಾರ ತಾಲೂಕಿನ ಕಳ್ಳಂಬೆಳ್ಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಸದರಿ ಶಿಬಿರದ ಅನೂಕೂಲ ಪಡೆದುಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.

ಕೆಂಪಮ್ಮದೇವಿ ರಥೋತ್ಸವ
ತಿಪಟೂರು: ನಗರದ ಗ್ರಾಮದೇವತೆ ಕೆಂಪಮ್ಮದೇವಿ ರಥೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಕೆ. ಷಡಕ್ಷರಿ, ಕೆಜೆಪಿ ಮುಖಂಡ ಲೋಕೇಶ್ವರ ಮತ್ತು ಮಾಜಿ ಶಾಸಕ ನಾಗೇಶ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.  ಮೇ 20ರಂದು ಹಾಲು ಪಲ್ಲಕ್ಕಿ ಉತ್ಸವ, ರಾತ್ರಿ 9.30ಕ್ಕೆಐರಾವತ ದರ್ಬಾರ್ ಹೂವಿನ ಅಲಂಕಾರದೊಂದಿಗೆ ನಗರದ ರಾಜಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಉತ್ಸವ ನಡೆಯಲಿದೆ. ಅಂದೇ ರಾತ್ರಿ 1.30ಕ್ಕೆ ಮದ್ದಿನ ಚಮತ್ಕಾರ ನಡೆಯಲಿದೆ.

ರಸಗೊಬ್ಬರ ದರ ಪರಿಷ್ಕರಣೆ
ತುಮಕೂರು: ರಸಗೊಬ್ಬರ ದರಗಳನ್ನು 2013-14ನೇ ಸಾಲಿಗೆ ಅನ್ವಯಿಸುವಂತೆ ಏಪ್ರಿಲ್ 1 ರಿಂದ ಪರಿಷ್ಕರಣೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಮಾರಾಟಗಾರರು ಪರಿಷ್ಕೃತ ಗರಿಷ್ಠ ಮಾರಾಟ ದರವನ್ನು ರಿಯಾಯತಿ ದರದೊಂದಿಗೆ ರಸಗೊಬ್ಬರ ಚೀಲದಲ್ಲಿ ಮುದ್ರಿಸಬೇಕು, ಚಿಲ್ಲರೆ ಮಾರಾಟದ  ಸ್ಥಳದವರಿಗೆ ಸಾಗಾಣಿಕೆಯನ್ನು ಮಾಡಬೇಕು.  ರಸಗೊಬ್ಬರ ಅಂಗಡಿಗಳಲ್ಲಿ ಪರಿಷ್ಕೃತ ದರಗಳನ್ನು ಸೂಚನಾ ಫಲಕದಲ್ಲಿ ಪ್ರದರ್ಶನ ಮಾಡಬೇಕು ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುವಾಗ ರೈತರ ಸಹಿಯನ್ನು ಪಡೆದು ರಸೀದಿಯನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಅರ್ಜಿ ಆಹ್ವಾನ
ತುಮಕೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ  (ಮಹಿಳಾ) ತಿಪಟೂರು ಸಂಸ್ಥೆಗೆ 2013-14ನೇ  ಸಾಲಿಗೆ ಆನ್‌ಲೈನ್ ಮೂಲಕ ಮೆರಿಟ್  ಕಂ. ರಿಸರ್ವೇಷನ್ ಆಧಾರಿತ ಪ್ರವೇಶಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶ ಅರ್ಜಿಗಳನ್ನು ಮೇ 31 ರವರೆಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಲ್ಲಿಸಬಹುದು.

ಕಲ್ಲೂರಲ್ಲಿ ಕೋದಂಡರಾಮ ಪಟ್ಟಾಭಿಷೇಕ
ಗುಬ್ಬಿ: ತಾಲೂಕಿನ ಕಲ್ಲೂರು ಗ್ರಾಮದಲ್ಲಿ 80 ನೇ ವರ್ಷದ ಶ್ರೀರಾಮ ಸಪ್ತಾಹ ಹಾಗೂ ಕೋದಂಡರಾಮ ಪಟ್ಟಾಭಿಷೇಕ ಸೋಮವಾರ ಭಕ್ತಾದಿಗಳ ಸಮ್ಮುಖದಲ್ಲಿ ವೈಭಯುತವಾಗಿ ನಡೆಯಿತು. ಅಪಾರ ಭಕ್ತ ಸಮೂಹ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಕಳಸ ಪ್ರತಿಷ್ಠಾಪನೆ ಸೇರಿದಂತೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ,ಪಾನಕ, ಪಣ್ಯಾರ ವ್ಯವಸ್ಥೆ ಮಾಡಿದ ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದು, ತಾಲೂಕಿನ ಸುತ್ತಮುತ್ತಲಿನ ಹಾಗೂ ದೂರದೂರಗಳ ಭಕ್ತರು ಅಗಮಿಸಿದ್ದರು.

ಮಗಳ ಆತ್ಮಹತ್ಯೆ;ತಂದೆಯೂ ನೇಣಿಗೆ
ಶಿರಾ: ಮಗಳ ಆತ್ಮಹತ್ಯೆಯಿಂದ ಮನನೊಂದ ತಂದೆ ತನ್ನ ಮನೆಯ ಶೆಡ್‌ನಲ್ಲಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೌಡಗೆರೆ ಹೋಬಳಿಯ ಬ್ರಹ್ಮಸಂದ್ರದಲ್ಲಿ ನಡೆದಿದೆ. ಗ್ರಾಮದ ಕೊರಮಯ್ಯ (60) ಎಂಬವರೇ ಮೃತ ದುರ್ದೈವಿ. ಕಳೆದ ಒಂದು ವಾರದ ಹಿಂದೆ ಇವರ ಮಗಳು, ಪ್ರಾಥಮಿಕ ಶಾಲಾ ಶಿಕ್ಷಕಿ ಭುವನೇಶ್ವರಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಚಿಂಚೋಳ್ಳಿ ತಾಲೂಕಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ನೊಂದ ತಂದೆ ಕೊರಮಯ್ಯ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಿಸಿಎಂ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ
ತಿಪಟೂರು: ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖಾ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆಗಳು ಮತ್ತು ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಇಲಾಖಾಧಿಕಾರಿ ಬಾನು ತಿಳಿಸಿದ್ದಾರೆ. ಇಲಾಖಾ ವಿದ್ಯಾರ್ಥಿನಿಯಗಳಾದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ತಿಪಟೂರು, ಬಾಲಕರ ವಿದ್ಯಾರ್ಥಿನಿಲಯ ತಿಪಟೂರು, ಬಳುವನೇರಲು, ಕೋಟನಾಯಕನಹಳ್ಳಿ, ಬಿಳಿಗೆರೆ ಹಾಗೂ ಆಶ್ರಮ ಶಾಲೆಗಳಾದ ತಾಲೂಕಿನ ಬೆನ್ನಾಯಕನಹಳ್ಳಿ ಗೊಲ್ಲರಹಟ್ಟಿ, ಖಾಸಗಿ ವಿದ್ಯಾರ್ಥಿನಿಲಯಗಳಾದ ಹಾಲ್ಕುರಿಕೆ, ಕಲ್ಲುಶೆಟ್ಟಿಹಳ್ಳಿ, ನೊಣವಿನಕೆರೆ ಈ ವಿದ್ಯಾರ್ಥಿನಿಲಯಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಸರ್ಕಾರದಿಂದ ನಡೆಯುತ್ತಿರುವ ಮತ್ತು ಸರ್ಕಾರದಿಂದ ಅಂಗೀಕೃತವಾದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹಾಗೂ ಅನುದಾನಿತ ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆಶ್ರಮ ಶಾಲೆಗಳಿಗೆ ಸೇರಬಯಸುವ ಪ.ಜಾತಿ, ಪ.ವರ್ಗ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು. ಅನುತ್ತೀರ್ಣ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ತಿಪಟೂರು ತಾಲೂಕು ಹಿಂದುಳಿದ ಕಲ್ಯಾಣ ಇಲಾಖೆ ಅಥವಾ ವಿದ್ಯಾರ್ಥಿ ನಿಲಯಗಳಿಂದ ಉಚಿತವಾಗಿ ಪಡೆದು ಅರ್ಜಿಯೊಂದಿಗೆ ಆದಾಯ ಪ್ರಮಾಣ ಪತ್ರ, ಶಾಲೆಯ ಪ್ರವೇಶ ಪತ್ರ, ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರಗಳನ್ನು ಜೂ.6ರೊಳಗೆ ನಿಲಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಹಿಂದುಳಿದ ವರ್ಗದ ಇಲಾಖೆಯನ್ನು ಸಂಪರ್ಕಿಸಬಹುದು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement