ಅನಧಿಕೃತ ಬಿತ್ತನೆ ಬೀಜ ವಶ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿಯ ಮಾದಾಪುರ ಗ್ರಾಮದ ಚಂದ್ರೇಗೌಡ ಹಾಗೂ ರಾಮೇಗೌಡ ಅವರು ಅನಧಿಕೃತವಾಗಿ ಬಿತ್ತನೆ ಬೀಜ ಮಾರಾಟ ಮಾಡಿರುವುದರಿಂದ, ಅವರ ವಿರುದ್ಧ ಬೀಜ ನಿಯಂತ್ರಣ ಆದೇಶ 1983ರನ್ವಯ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜು ತಿಳಿಸಿದ್ದಾರೆ.
ಸ್ಥಳೀಯ ರೈತರ ದೂರಿನ ಮೇರೆಗೆ ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲಾ ಅವರು ಬುಧವಾರ ಮಾದಾಪುರ ಗ್ರಾಮದಲ್ಲಿ ಪರಿಶೀಲನೆ ನಡೆಸಿ, ಅನಧಿಕೃತವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
10.25 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಶಪಡಿಸಿಕೊಂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.