ಅನುದಾನ ದುರುಪಯೋಗದ ಅನುಮಾನ
ಕ.ಪ್ರ. ವಾರ್ತೆ , ಕುಣಿಗಲ್ , ಮೇ 23
ಪುರಸಭೆಯ ಶೇ.22.75 ಹಾಗೂ ಶೇ.7.5ರ ಅನುದಾನದಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನುದಾನ ದುರುಪಯೋಗವಾಗಿರುವ ಅನುಮಾನಗಳಿದ್ದು, ಕೂಡಲೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವುವಂತೆ, ಇಲ್ಲವಾದಲ್ಲಿ ಮುಲಾಜಿಲ್ಲದೆ ಇಲಾಖಾ ತನಿಖೆಗೆ ನಾನೇ ಪತ್ರ ಬರೆಯಬೇಕಾಗುತ್ತೆ ಎಂದು ಶಾಸಕ ಡಿ.ನಾಗರಾಜಯ್ಯ ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದರು.
ಗುರುವಾರ, ಪುರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕರು, ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸೇರಿದಂತೆ ವಿವಿಧ ಅನುದಾನಗಳ ವೆಚ್ಚ, ಪೂರಕ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದರು. ಶೇ.22.75ರಲ್ಲಿ ಶೌಚಾಲಯ ನಿರ್ಮಾಣ, ಲ್ಯಾಪ್ಟಾಪ್ ವಿತರಣೆ, ಹಾಸ್ಟೆಲ್ಗಳಿಗೆ ಕಳೆದ ಹಲವು ಸಾಲಿನಲ್ಲಿ ಸೋಲಾರ್ ವಾಟರ್ ಹೀಟರ್ ನೀಡಿರುವ ಬಗ್ಗೆ, ಪ್ರತಿಭಾ ಪುರಸ್ಕಾರ ನೀಡಿರುವ ಬಗ್ಗೆ ವರದಿಗಳನ್ನು ಕೇಳಿದಾಗ, ಮುಖ್ಯಾಧಿಕಾರಿ ಶುಭಾ, ಸಂಬಂಧಿಸಿದ ಗುಮಾಸ್ತ ಹನುಮಂತಯ್ಯ ಗೈರಾಗಿದ್ದಾರೆಂಬ ಸಬೂಬು ಮುಂದಿಟ್ಟರು.
ಗೋಲ್ಮಾಲ್ ಗಮನಕ್ಕೆ ಬಂದಿದೆ: ಬಡವರಿಗೆ ಆರ್ಥಿಕ ಸೌಲಭ್ಯ ಕಲ್ಪಿಸುವ ಶೇ.7.5ರ ಅನುದಾನ ವೆಚ್ಚದಲ್ಲಿ ಸಾಕಷ್ಟು ಗೋಲ್ಮಾಲ್ ಆಗಿರುವುದು ನನ್ನ ಗಮನಕ್ಕೆ ಬಂದಿದೆ, ಶೌಚಾಲಯ ನಿರ್ಮಾಣ ಮಾಡದೆ, ಸಹಾಯಧನ ನೀಡಿದ್ದೀರಾ, ಮನೆರಿಪೇರಿ ಮಾಡದೆ ಹಣ ಮಂಜೂರು ಮಾಡಲಾಗಿದೆ, ಒಟ್ಟಾರೆ 16ಲಕ್ಷ ರು. 2012-13ರಲ್ಲೆ ಆಗಿದೆ. ಉಳಿದ ಅವಧಿಯ ವಿವರಗಳೆಲ್ಲಿ ಎಂದು ಶಾಸಕರು ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ಈ ವಿವರಗಳು ಸಹ ಹನುಮಂತಪ್ಪನವರ ಬಳಿ ಇದ್ದು, ಸದರಿಯವರು ಅನಧಿಕೃತ ಗೈರಾಗಿ ಕಚೇರಿ ಕೆಲಸ ಕಾರ್ಯಕ್ಕೆ ತೊಂದರೆಯಾಗಿದೆ, ಅವರು ನಿರ್ವಹಿಸಿದ್ದ ಶೇ.22.75, ಶೇ.7.5 ಹಾಗೂ ಶೇ.3 ರ ಆರ್ಥಿಕ ವೆಚ್ಚಕ್ಕೆ ಯಾವುದೇ ಕಡತಗಳು ಸಲ್ಲಿಸಿಲ್ಲ. ಈಗ ವರ್ಗವಾಗಿದ್ದು, ಕಡತ ಹಸ್ತಾಂತರಿಸುತ್ತಿಲ್ಲ. ಸದರಿಯವರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಅಸಮಾಧಾನ: ಇದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಸಬೂಬು ಬೇಡ ಶೀಘ್ರವಾಗಿ ಕಳೆದ ಮೂರು ವರ್ಷದ ವೆಚ್ಚಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿ. ಲೋಪಗಳು ಕಂಡಬಂದರೆ ಕ್ರಮಕ್ಕೆ ಶಿಫಾರಸು ಮಾಡಿ ಇಲ್ಲವಾದಲ್ಲಿ ನಾನೇ ಕ್ರಮಕ್ಕೆ ಸರ್ಕಾರಕ್ಕೆ ಬರೆಯಬೇಕಾಗುತ್ತೆ ಎಂದು ಎಚ್ಚರಿಸಿದರು. ಎಸ್ಎಫ್ಎಸಿ ಅನುದಾನದಲ್ಲಿ ಕಾಮಗಾರಿ ಕೈಗೊಂಡರೂ ಗುತ್ತಿಗೆದಾರ ಕೆಲಸ ಪ್ರಾರಂಭಿಸದಿರುವ ಬಗ್ಗೆ, ರಾಷ್ಟ್ರೀಯಹೆದ್ದಾರಿ 48ರ ಬದಿಯಲ್ಲಿ ಭೂಸೇನಾ ನಿಗಮ ಕಳಪೆ ಕಾಮಗಾರಿ ಕೈಗೊಂಡರೂ ಹೋಗಿ ಪರಿಶೀಲಿಸುವ ಸೌಜನ್ಯ ತೋರದ ಎಂಜಿನಿಯರ್ ಲಕ್ಷ್ಮೀನರಸೇಗೌಡರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರಿಗೆ ಮುಲಾಜಿಲ್ಲದೆ ಬ್ಲಾಕ್ ಲಿಸ್ಟ್ಗೆ ಹಾಕುವ ನೋಟಿಸ್ಜಾರಿ ಮಾಡಿ. ಭೂಸೇನಾ ನಿಗಮದವರಿಗೆ ಸಮರ್ಪಕ ಕಾಮಗಾರಿ ಮಾಡದಿರುವ ಬಗ್ಗೆ ನೋಟಿಸ್ ನೀಡುವಂತೆ, ಪುರಸಭೆ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ತುರ್ತು ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪಟ್ಟಣದಲ್ಲಿ ಕಸವಿಲೆವಾರಿಗಾಗಿ ತರಿಸಿದ ಪುರಸಭೆ ಕೈಗಾಡಿಗಳನ್ನು ಹಳೇ ಪುರಸಭಾ ಸದಸ್ಯರ ಮನೆಯ ಬಳಿ ನಿಲ್ಲಿಸಲಾಗಿದೆ ಎಂಬ ಪರಿಸರ ಅಭಿಯಂತರ ಶೀಲಾ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸಾರ್ವಜನಿಕರ ಹಣದಿಂದ ತಂದ ಪುರಸಭೆ ಸ್ವತ್ತನ್ನು, ಪುರಸಭಾ ಸದಸ್ಯರ ಮನೆ ಬಳಿ ನಿಲ್ಲಿಸಿರುವ ಔಚಿತ್ಯ ಖಂಡಿಸಿ, ಈ ಪೈಕಿ ಬಹುತೇಕ ಗುಜರಿ ಅಂಗಡಿಗೆ ಹಾಕಲಾಗಿದೆ. ಸರ್ಕಾರಿ ಸ್ವತ್ತು ಕಾಪಾಡುವ ಪರಿ ಇದೆಯೆ, ನಿಮ್ಮ ಕಾರ್ಯವೈಖರಿ ಇದೇನಾ, ಎಲ್ಲ ಕೈಗಾಡಿಗಳನ್ನು ಪುರಸಭೆಯಲ್ಲಿ ಹಾಜರುಪಡಿಸಿ ಲೆಕ್ಕ ನೀಡುವಂತೆ, ಕಾಯಂ ಪೌರಕಾರ್ಮಿಕರ ಅನಗತ್ಯ ಗೈರು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಕಸವಿಲೆವಾರಿಗೆ ಹೊಸಟೆಂಡರ್ ಕರೆಯುವಂತೆ ಸೂಚಿಸಿದರು.
ಪಾಲ್ಗೊಳ್ಳುವೆ: ಕಸವಿಲೆವಾರಿ ದಿಸೆಯಲ್ಲಿ ಜನತೆಯಲ್ಲಿ ಅರಿವು ಮೂಡಿಸುವ ಜೊತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕ್ರಮ ರೂಪಿಸಿದಲ್ಲಿ ತಾವು ಪಾಲ್ಗೊಳ್ಳುವುದಾಗಿ ತಿಳಿಸಿದರು.
ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ ಕುಡಿಯುವ ನೀರು ಪೂರೈಕೆ ಘಟಕ ಪುರಸಭೆ ವಶಕ್ಕೆ ಪಡೆಯುವಾಗ ಯಾವುದೇ ದಾಖಲೆ ಪಡೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ, ಈ ದಿಸೆಯಲ್ಲಿ ಕೂಡಲೆ ಅಗತ್ಯ ಕ್ರಮ ಕೈಗೊಳ್ಲುವಂತೆ, ಬರಪರಿಹಾರ ಯೋಜನೆಯಡಿಯಲ್ಲಿ 20 ಲಕ್ಷ ಹಣವಿದ್ದರೂ, ಕುಡಿಯುವ ನೀರು ಪೂರೈಕೆಗೆ ಬೋರ್ವೆಲ್ ಕೊರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿವರಣೆ ಕೇಳಿದಾಗ, ಅಭಿಯಂತ ಶ್ರೀಕಾಂತ್ ಸಲ್ಲಿಸಿರುವ ಅವೈಜ್ಞಾನಿಕ ಅಂದಾಜು ಪಟ್ಟಿಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದು, ಸದರಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಸಿದ ಮೇರೆಗೆ, ಮುಖ್ಯಾಧಿಕಾರಿ ಶುಭಾ, ಎಂಜಿನಿಯರ್ ಶ್ರೀಕಾಂತ್ ಅವರ ಅಸಮರ್ಪಕ ಕಾರ್ಯವೈಖರಿ ಬಗ್ಗೆ ಅವರನ್ನು ಅಮಾನತ್ತುಪಡಿಸಲು, ಮೇಲಾಧಿಕಾರಿಗಳು ಕ್ರಮ ಕೈಗೊಂಡಿದ್ದು, ಶೀಘ್ರವೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿವಿಧ ಕಾಮಗಾರಿಗಳ ಹಾಗೂ ಪೂರಕ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಶಾಸಕರು, ಸರ್ಕಾರದ ಅನುದಾನ ಪೋಲಾಗದಂತೆ, ಅರ್ಹ ಫಲಾನುಭವಿಗಳಿಗೆ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎಲ್.ಹರೀಶ್, ಆರೋಗ್ಯ ನಿರೀಕ್ಷಕ ನಟೇಶ್, ಕಂದಾಯ ನಿರೀಕ್ಷಕ ರಮೇಶ್, ಸಿಬ್ಬಂದಿಗಳಾದ ನರಸಿಂಹಯ್ಯ, ಗಂಗಾಧರ, ಪ್ರೇಮಾ, ನಾಗರತ್ನಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.