ಕಲ್ಪತರು ಕಾಲೇಜು ಶೌಚಗುಂಡಿ ದುರ್ವಾಸನೆಗೆ ನಾಗರಿಕರ ಆಕ್ರೋಶ
ತಿಪಟೂರು: ರಾಜ್ಯದಲ್ಲಿಯೇ ಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಹೆಸರಾಂತ ತಿಪಟೂರು ನಗರದ ಕಲ್ಪತರು ವಿದ್ಯಾಸಂಸ್ಥೆ ತನ್ನ ಕಾಲೇಜು ಕ್ಯಾಂಪಸ್ ಆವರಣದ ಸಂಜೀವಿನ ವನದಲ್ಲಿ ದೊಡ್ಡದಾದ ಗುಂಡಿ ಮಾಡಿ ಕಲ್ಪತರು ಲೇಡಿಸ್ ಹಾಸ್ಟೆಲ್ ಶೌಚಾಲಯ ನೀರು ಹಾಗೂ ತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಆದರೆ ಈ ಕೊಳಚೆ ನೀರಿನ ದುರ್ವಾಸನೆಯಿಂದ ಹಿಂಭಾಗದಲ್ಲಿರುವ ಬಿಸಿಎಂ ಲೇಡಿಸ್ ಕಾಲೇಜಿನ ಮತ್ತು ಅಕ್ಕಪಕ್ಕದ ಮನೆಯವರು ವಾಸ ಮಾಡುವುದು ಕಷ್ಟವಾಗಿದೆ. ಇವರು ನಾನಾ ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದು, ಈ ಬಗ್ಗೆ ನಗರಸಭೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ಹತ್ತಾರು ಬಾರಿ ದೂರು ನೀಡಿದ್ದರೂ ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಮುಂದುವರೆಯುತ್ತಿದೆ.
ಕಾಲೇಜು ಕ್ಯಾಂಪಸ್ ಪಕ್ಕದ ವಿದ್ಯಾನಗರ ಹೊಸಬಡಾವಣೆ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳೂ ಈ ದುರ್ವಾಸನೆಯಿಂದಲೇ ಕಾಲಕಳೆಯುವಂತಾಗಿದೆ. ಈ ಬಗ್ಗೆ ನಾಗರಿಕರು ಮಾತ್ರ ದಿನನಿತ್ಯ ಹಿಡಿ ಶಾಪ ಹಾಕುತ್ತಿದ್ದು, ಈ ಬಗ್ಗೆ ನಗರಾಡಳಿತ ಸೂಕ್ತ ಕ್ರಮ ಕೈಗೊಂಡು ದುರ್ವಾಸನೆಗೆ ಮುಕ್ತಿ ನೀಡಬೇಕು ಮತ್ತು ಹೆಸರಾಂತ ವಿದ್ಯಾಸಂಸ್ಥೆಯಾಗಿರುವ ಕಲ್ಪತರು ವಿದ್ಯಾಸಂಸ್ಥೆ ಸಾರ್ವಜನಿಕರಿಗೆ ನೀಡುತ್ತಿರುವ ತೊಂದರೆಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಕ್ರೋಶ ಪಡಿಸಿದ್ದಾರೆ.