ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಝೇಂಕರಿಸುತ್ತಿದೆ ಭರಣಿ ಹುಳುಗಳ ನಾದ

Vishwanath S
Updated On : 24 May 2013, 12:25 pm

ಕ.ಪ್ರ.ವಾರ್ತೆ ,   ತುಮಕೂರು ,   ಮೇ 23
ತುಮಕೂರಿನಲ್ಲಿ ಈಗ ಎಲ್ಲೆಲ್ಲೂ ಭರಣಿ ಹುಳುಗಳ ನಿನಾದ.
ರಸ್ತೆ ಬದಿ, ಮನೆಗಳ ಸುತ್ತಮುತ್ತ ಇರುವ ಗಿಡಮರಗಳಲ್ಲಿ ಝೀ ಎಂಬ ಝೇಂಕರಿಸುವ ಶಬ್ದ ಈಗ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಮೇ ತಿಂಗಳ ಕೊನೆಯವರೆಗೂ ಉದ್ದನೆಯ ರೆಕ್ಕೆ ಹೊಂದಿದ ಈ ಕೀಟ ಸದ್ದು ಮಾಡುತ್ತದೆ.
2 ಇಂಚು ಉದ್ದದ ಬೂದಿ ಬಣ್ಣದ ಗಂಡು ಭರಣಿ ಹುಳ ಹೆಣ್ಣಿನ  ಆಕರ್ಷಣೆಗಾಗಿ ಹಾಗೂ ಬೇರೆ ಗಂಡು ಕೀಟಗಳನ್ನು ದೂರವಿಡಲು ಹಾಗೂ ತನ್ನ ಸರಹದ್ದನ್ನು ಕಾಪಾಡಿಕೊಳ್ಳಲು ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಶಬ್ದ ಮಾಡುತ್ತಿದೆ. ಆದರೆ ಶಬ್ದ ಬಾಯಿಯಿಂದ ಉತ್ಪತ್ತಿಯಾಗುವುದಿಲ್ಲ. ಆದರೆ ಉದರ ಭಾಗದ ಎರಡು ಬದಿಯಲ್ಲಿ ಮೃದಂಗದಂತಹ ರಚನೆಗಳಿವೆ. ತೆಳುವಾದ ಹೊರಚರ್ಮದ ಪೊರೆಯಿಂದ ಆವೃತ್ತವಾದ ಕೋಣೆ ಭಾಗಗಳಿಗೆ ಮೃದಂಗಗಳು ಕಂಪಿಸುವುದರಿಂದ ನಿರಂತರವಾಗಿ 70 ರಿಂದ 80 ಡಿಸಿಬೆಲ್ ತೀವ್ರತೆ ಶಬ್ಧ ಹೊರಹೊಮ್ಮುತ್ತದೆ.
ಭರಣಿ ಮಳೆ ಪ್ರಾರಂಭವಾಗುಷ್ಟರಲ್ಲಿ ಈ ಕೀಟಗಳ ಶಬ್ದವು ಸಹ ಹೆಚ್ಚಾಗುತ್ತದೆ. ಗಂಡು ಹೆಣ್ಣಿನೊಡನೆ ಮಿಲನವಾದ ಮೇಲೆ ಗಂಡು ಸ್ವಲ್ಪ ದಿನಗಳಲ್ಲೇ ಸತ್ತು ಹೋಗುತ್ತದೆ. ಹೆಣ್ಣು ಕೀಟ ಮರಗಳ ಮೃದು ರೆಂಬೆಯನ್ನು ಕೊರೆದು ನೂರಾರು ಮೊಟ್ಟೆಗಳನ್ನು ಇಟ್ಟು ತಾನು ಸಹ ಸಾವನ್ನಪ್ಪುತ್ತದೆ.
ಮಳೆಗಾಲ ಪ್ರಾರಂಭವಾಗಿ ಭೂಮಿ ತಂಪಾದ ಮೇಲೆ ಮೊಟ್ಟೆಯಿಂದ ಹೊರಬಂದ ಮರಿಗಳು ಬಿಳಿ ಗೆದ್ದಲು ಹುಳುಗಳಂತಿರುತ್ತವೆ. ಈ ಮರಿಗಳು ಮರದಿಂದ ನೆಲಕ್ಕೆ ಬಿದ್ದು ಬಲಯುತವಾದ ಮುಂಗಾಲುಗಳಿಂದ ಭೂಮಿ ಕೊರೆದು ಸಸ್ಯಗಳ ಬೇರುಗಳಿಂದ ರಸವನ್ನು ಹೀರುತ್ತ ದೊಡ್ಡದಾಗುತ್ತವೆ. ಒಂದು ವರ್ಷ ಪೂರ್ತಿ  ಭೂಮಿಯೊಳಗೆ ಕಾಲ ಕಳೆಯುವ ಈ ಹುಳುಗಳು ಬೆಳೆದು ದೊಡ್ಡದಾದ ಮೇಲೆ ಬೇಸಿಗೆಯ ಸುಡು ಬಿಸಿಲು ಪ್ರಾರಂಭವಾದ ಮೇಲೆ ಭೂಮಿಯಿಂದ ಹೊರಬಂದು ಮಾರ್ಚ್ ತಿಂಗಳಲ್ಲಿ ತನ್ನ ಗಟ್ಟಿಯಾದ ಹೊರಕವಚ ಕಳಚಿ ರೆಕ್ಕೆಗಳನ್ನು ಹೊಂದಿದ ಕೀಟವಾಗಿ ಹೊರಬಂದು ತನ್ನ ಝೇಂಕಾರದ ಶಬ್ದ ಪ್ರಾರಂಭ ಮಾಡುತ್ತದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ. ಗುಂಡಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement