ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳಿಗೆ ಆದ್ಯತೆ

Vishwanath S
Updated On : 24 May 2013, 12:26 pm

ಚಿಕ್ಕನಾಯಕನಹಳ್ಳಿ:  ತಾಲೂಕಿನ ಜನತೆ ನಿರುದ್ಯೋಗ ಸಮಸ್ಯೆಯಿಂದ ಗುಳೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುವುದಾಗಿ ಶಾಸಕ ಸಿ.ಬಿ.ಸುರೇಶ್‌ಬಾಬು ನುಡಿದರು.
ಮೇ 22ರಂದು ಸಂಜೆ ರೋಟರಿ ಬಾಲಭವನದಲ್ಲಿ ರೋಟರಿ ಸಂಸ್ಥೆವತಿಯಿಂದ ಏರ್ಪಡಿಸಿದ್ದ, ರೋಟರಿ ಪದಾಧಿಕಾರಿಗಳ ನಿರ್ಗಮನ ಮತ್ತು ನೂತನ ಜನಪ್ರತಿನಿಧಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಪ್ರಪಂಚದಲ್ಲ ರೋಟರಿ ಸಂಸ್ಥೆಯ ಸೇವೆ ಅನನ್ಯ. ಇದು ಸರ್ವಕಾಲಕ್ಕೂ ಹೀಗೆ ಮುಂದುವರಿಯ ಬೇಕು. ಕಳೆದ ಅವಧಿಯ ಅಧ್ಯಕ್ಷರು ಹೆಚ್ಚು ಹೆಚ್ಚು  ಜನಪರ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಮುಂಬರುವ ಪದಾಧಿಕಾರಿಗಳು ಸಹ ಮುಂದುವರಿಸಿಕೊಂಡು ಹೋಗಬೇಕಿದೆ. ಮುಂದಿನ ನಿಮ್ಮ ಕಾರ್ಯಚಟುವಟಿಕೆಗಳಿಗೆ ಅವರ ಕಾರ್ಯಕ್ಷಮತೆಯನ್ನು ಆದರ್ಶವಾಗಿಟ್ಟುಕೊಳ್ಳಿ ಎಂದರು.
ದರ್ಪ ದೌಲತ್ತು ತೋರಿಲ್ಲ:  ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸದಿಂದ ನಾನು ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ 42 ವರ್ಷಗಳ ವಯೋವಾನದಲ್ಲಿ  ಎದುರಿಸಿದ 5 ಚುನಾವಣೆಗಳಲ್ಲಿ ಎರಡನ್ನು ಸೋತು ಮೂರನ್ನು ಗೆದ್ದಿದ್ದೇನೆ. ನಾನು ಯಾವತ್ತೂ ಅಧಿಕಾರವಿದೆ ಎಂದು ದರ್ಪದೌಲತ್ತು ತೋರಿಲ್ಲ. ಜನ ನನ್ನನ್ನು ಪ್ರೀತಿಸಲು ಇದೇ ಕಾರಣ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ 1.5 ಕೋಟಿ ವೆಚ್ಚದಲ್ಲಿ ತೀನಂಶ್ರೀ ಭವನವನ್ನು ನಿರ್ಮಿಸಬೇಕಿದೆ. ತಾಲೂಕಿನ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಶ್ರಮಿಸುತ್ತೇನೆ. ಈಗಾಗಲೇ ನಾಲ್ಕೈದು  ಪ್ರಸಿದ್ಧ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಅವರಿಂದ ಆಶಾದಾಯಕ ಪ್ರತಿಕ್ರಿಯೆ ಬಂದಿದೆ. ಇದಲ್ಲದೆ ತಾಲೂಕಿನ ಬಹುದಿನಗಳ ಬೇಡಿಕೆಯಾದ ಹೇಮಾವತಿ ಕುಡಿಯುವ ನೀರಿನ ಯೋಜನೆ ಜಾರಿಗೆ ಹೋರಾಟ ಕೈಗೊಳ್ಳುತ್ತೇನೆ. ತಾಲೂಕಿಗೆ ಖಾಸಗಿಯಾಗಲಿ ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸುವುದು ನನ್ನ ಆದ್ಯತೆಯಾಗಿದೆ ಎಂದರು.
ಪ್ರೇರಣೆಯಾಗಲಿ: ನಂತರ ಮಾತನಾಡಿದ ಆರ್.ಐ. ಜಿಲ್ಲಾ 3190ರ ಗೌವರ್ನರ್  ಆರ್.ಬದರಿ ಪ್ರಸಾದ್ ಮಾತನಾಡಿ ರೋಟರಿ ಸಂಸ್ಥೆಗಳಲ್ಲಿ ಅಧ್ಯಕ್ಷ ಹುದ್ದೆ ಪಡೆಯುವುದು ಸೇವೆಗಾಗಿ. ಎಂ.ವಿ. ನಾಗರಾಜರಾಯರ ರೋಟರಿ ಸೇವೆ ಮುಂದಿನವರಿಗೆ ಮಾರ್ಗದರ್ಶನ  ಮತ್ತು ಪ್ರೇರಣೆಯಾಗಲಿ. ರೋಟರಿಯಿಂದ ಪಟ್ಟಣದಲ್ಲಿ 50 ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಲು ಪುರಸಭೆವತಿಯಿಂದ ನಿವೇಶನವನ್ನು ಕೋರಿದ್ದೆವು. ಆದರೆ ಅವರಿಂದ ಸಹಕಾರ ದೊರೆಯದಿದ್ದುದರಿಂದ ರೋಟರಿ ಆಶಯ ನೆರವೇರಲಿಲ್ಲ. ಮುಂಬರುವ ದಿನಗಳಲ್ಲಿ ನಿವೇಶನ ನೀಡಿದ್ದೇ ಆದರೆ ಉತ್ತಮ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚುವ ಕಾರ್ಯ ಮಾಡುತ್ತೇವೆ ಎಂದರು.
ಅಚ್ಚುಕಟ್ಟು: ರೋ. ಬಿಳಿಗೆರೆ ಶಿವಕುಮಾರ್ ಮಾತನಾಡಿ ಸಭೆ ಸಮಾರಂಭಗಳನ್ನು ನಡೆಸುವ ಬಗ್ಗೆ ಅಚ್ಚುಕಟ್ಟುತನವನ್ನು ನಾವು ಎಂ.ವಿ.ಎನ್‌ರಿಂದ ಕಲಿಯಬೇಕಿದೆ. ಯಾವುದೇ ಕಾರ್ಯಕ್ರಮವಿರಲಿ ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅದನ್ನು ನಾವು ಅನುಸರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ 30 ಶಾಲೆಗಳಿಗೆ ವಾಟರ್ ಫಿಲ್ಟರ್‌ಗಳನ್ನು ವಿತರಿಸಲಾಯಿತು.ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟರಿ ಆಶಾ ಪ್ರಸನ್ನಕುಮಾರ್, ಡಾ.ಸಿ.ಎಂ.ಸುರೇಶ್, ರೋಟರಿ ಕಾರ್ಯದರ್ಶಿ  ರೋ. ಎಂ.ದೇವರಾಜ್, ಸಿ.ಡಿ.ಸುರೇಶ್, ಭವಾನಿ ಜಯರಾಂ, ತೇಜಾವತಿ ನರೇಂದ್ರ, ಸಾಮಾಜಿಕ ಚಿಂತಕ ಸಿ.ಡಿ.ಚಂದ್ರಶೇಖರ್ ಮುಂತಾದವರಿದ್ದರು.
ಕಾರ್ಯಕ್ರಮದಲ್ಲಿ  ಶಾಸಕರ ಜೊತೆಯಲ್ಲಿ ಪುರಸಭೆಯ ಚುನಾಯಿತ ಸದಸ್ಯರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement