ವಿದ್ಯುತ್ ತಂತಿ ತುಳಿದು ಸಾವು
ಕುಣಿಗಲ್: ದನಗಳನ್ನು ಮೇಯಿಸಿಕೊಂಡು ಬರಲು ಹೊರಟ್ಟಿದ್ದ ಮಹಿಳೆಯೊಬ್ಬಳು, ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ತಾಲೂಕಿನ ಕೋಡಿಹಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಜಯಮ್ಮ (55) ಎಂದು ಗುರುತಿಸಲಾಗಿದ್ದು, ಈಕೆ ಕೋಡಿಹಳ್ಳಿ ಪಾಳ್ಯದ ನಿವಾಸಿಯಾಗಿದ್ದು, ದನಗಳನ್ನು ಮೇಯಿಸಿಕೊಂಡ ಬರಲು ಕೊಟ್ಟಿಗೆಗೆ ತೆರಳುವಾಗ, ಮಾರ್ಗ ಮಧ್ಯೆ ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬೆಸ್ಕಾಂ ನಿರ್ಲಕ್ಷ್ಯತೆ ಬಗೆಗೆ ಮೃತಳ ಸಂಬಂಧಿಕರು ಕುಣಿಗಲ್ ಠಾಣೆಗೆ ದೂರು ನೀಡಿದ್ದಾರೆ.
ಔಷಧಿ ಅಂಗಡಿಯಲ್ಲಿ ಕಳ್ಳತನ
ಚಿಕ್ಕನಾಯಕನಹಳ್ಳಿ: ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದರೂ ಸಹ ಪಟ್ಟಣದಲ್ಲಿ ಕಳ್ಳತನಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಅಂಗಡಿ ಮಾಲೀಕ ರವಿ ಎಂದಿನಂತೆ ತಮ್ಮ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋದವರು, ಬೆಳಿಗ್ಗೆ ಬಂದು ಅಂಗಡಿ ತೆರೆಯುವಾಗ ಕಳವಾಗಿರುವ ವಿಷಯ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಕೈಗೊಂಡಿರುವ ಕಾನೂನು ಕ್ರಮದ ವಿಷಯ ತಿಳಿದು ಬಂದಿಲ್ಲ.
ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಪಾವಗಡ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಪ್ರವರ್ಗ1, ಪ್ರವರ್ಗ2ಎ, ಪ್ರವರ್ಗ 3ಎ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ 5ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಈ ಕೆಳಕಂಡ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಪಾವಗಡ, ಅಲ್ಪಸಂಖ್ಯಾತರ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಪಾವಗಡ, ಪಟ್ಟಣದ ಮಸೀದಿ ರಸ್ತೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯ ಸೇರಿದಂತೆ ತಾ, ಮಂಗಳವಾಡ, ಕಿಲಾರ್ಲಹಳ್ಳಿ ಮರಿದಾಸನಹಳ್ಳಿ, ರಂಗಸಮುದ್ರ, ಸಾಸಲಕುಂಟೆ, ವಳ್ಳೂರು ಗ್ರಾಮಗಳ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲಾಖೆಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 5ರೊಳಗೆ ತಾಲೂಕಿನ ಬಿಸಿಎಂ ಇಲಾಖೆ ಬಿಎಸ್‌ಎನ್‌ಎಲ್ ಕಚೇರಿ ಪಕ್ಕ ಪಾವಗಡ,ಇಲ್ಲಿಗೆ ಸಲ್ಲಿಸತಕ್ಕದು. ನವೀಕರಣ ವಿದ್ಯಾರ್ಥಿಗಳು ಜೂನ್ 5ರೊಳಗೆ ಪ್ರವೇಶ ಪಡೆಯಲು ಕೋರಲಾಗಿದ್ದು ವಿವರಗಳಿಗೆ ತಾ,ಪಾರ್ವತಮ್ಮ ಬಿಸಿಎಂ ತನಿಖಾಧಿಕಾರಿ ಪಾವಗಡ ಸಂಪರ್ಕಿಸಿ ಮಾಹಿತಿ ಪಡೆಯಲು ತಿಳಿಸಿದ್ದಾರೆ.
ಮಾದೀಹಳ್ಳಿ ಗ್ರಾಮಕ್ಕೆ ಮೂರು ತಿಂಗಳಿಂದ ರೇಷನ್ ನೀಡಿಲ್ಲ
ತಿಪಟೂರು: ತಾಲೂಕಿನ ಮತ್ತೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೀಹಳ್ಳಿ ಗ್ರಾಮದಲ್ಲಿ ಕಳೆದ 3 ತಿಂಗಳಿಂದ ಪಡಿತರ ಚೀಟಿಯಡಿ ಕೊಡುತ್ತಿರುವ ಪಡಿತರವನ್ನು ಕೊಡುತ್ತಿಲ್ಲ. ಗ್ರಾಮದ ಕಾರ್ಡ್‌ದಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯ ಕಾರ್ಯದರ್ಶಿಯನ್ನು ಕೇಳಿದರೆ ನಿಮ್ಮ ಕಾರ್ಡ್‌ಗಳು ರದ್ದಾಗಿವೆ ಎಂದು ಉಡಾಫೆಯಿಂದ ಗದರಿಸುತ್ತಿದ್ದಾರೆ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಇದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಅಸಭ್ಯವಾಗಿ ವರ್ತಿಸುತ್ತಾರೆ. ಕೂಡಲೆ ತಾಲೂಕು ಆಡಳಿತ ಇದನ್ನು ಸರಿಪಡಿಸಿ ಪಡಿತರ ಕೊಡಿಸಲು ಮುಂದಾಗದಿದ್ದರೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಸುಮಾರು 50ಕ್ಕೂ ಹೆಚ್ಚು ಪಡಿತರ ವಂಚಿತ ಗ್ರಾಮಸ್ಥರು ಲಿಖಿತ ದೂರಿನಲ್ಲಿ ಎಚ್ಚರಿಕೆ ನೀಡಿದ್ದು, ಈ ಕೂಡಲೆ ರೇಷನ್ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದರೋಡೆಕೋರರ ಬಂಧನ
ಹುಳಿಯಾರು: ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡುವ ಜಾಲದ ಸುಳಿವನ್ನರಿತ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಅವರ ಸೂಕ್ತ ಮಾಹಿತಿ ಅನ್ವಯ ವೃತ್ತನೀರೀಕ್ಷಕ ಪ್ರಭಾಕರ್ ಮತ್ತು ಹುಳಿಯಾರು ಪಿಎಸೈ ಅಂಜನಪ್ಪ ಅವರನ್ನೊಳಗೊಂಡ ತಂಡ ಮಂಗಳೂರು ಮೂಲದ ಮೂವರು ದರೋಡೆಖೋರರನ್ನು ಹುಳಿಯಾರಿನಲ್ಲಿ ಬಂಧಿಸಿದ್ದಾರೆ.
ಒಟ್ಟು ಐದು ಮಂದಿ ದರೋಡೆಖೋರರಲ್ಲಿ ಮಹಮದ್ ಮನ್ಸೂರ್ (28), ಹಿಷಾಮಲ್ಲಿಕ್ (21), ನೌಫಾಲ್ (20) ಅವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಇವರು ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಹೊನ್ನಯ್ಯನ ಪಾಳ್ಯದ ಕುಮಾರಸ್ವಾಮಿ ಎಂಬುವರಿಗೆ ಸೇರಿದ್ದ ಮಾರುತಿ ಜ್ಯುಯಲರಿ ಅಂಗಡಿ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಅಂಗಡಿ ಮಾಲೀಕರು ಅಂಗಡಿಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಪ್ರತಿ ನಿತ್ಯ ಅಂಗಡಿಯಿಂದ ಮನೆಗೆ ತೆಗೆದುಕೊಂಡು ಹೋಗಿ ಪುನಃ ಬೆಳಿಗ್ಗೆ ಅಂಗಡಿಗೆ ತರುತ್ತಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದ ದರೋಡೆಕೋರರು ಆ ಚಿನ್ನಾಭರಣ ಹಾಗೂ ಹಣವನ್ನು ಕಿತ್ತುಕೊಂಡು ಹೋಗಲು ಸಂಚುರೂಪಿಸಿ, ಮಾರುತಿ ಕಾರಿನಲ್ಲಿ ಐದು ಮಂದಿ ಹೊಂಚು ಹಾಕುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹುಳಿಯಾರು ಹಿರಿಯೂರು ರಸ್ತೆಯ ಬ್ರಹ್ಮಸಮಾಜದ ಕಟ್ಟಡದ ಸಮೀಪದಲ್ಲಿ ಹಿಡಿದಿದ್ದು, ಬಂಧಿತರಿಂದ 100 ಗ್ರಾಂ ಕಾರದಪುಡಿ ,500 ಗ್ರಾಂ ಉಪ್ಪಿನ ಪ್ಯಾಕೆಟ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದು ತಪ್ಪಿಸಿಕೊಂಡಿರುವ ಇಬ್ಬರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ಬುದ್ಧ ಪೂರ್ಣಿಮೆ ಮಾಂಸ ನಿಷೇಧ
ತುಮಕೂರು: ಬುದ್ಧ ಪೂರ್ಣಿಮಾ ಪ್ರಯುಕ್ತ ಮೇ 25 ರಂದು ಮಾಂಸ ಮಾರಾಟ ನಿಷೇಧಿತ ದಿನವೆಂದು ಘೋಷಿಸಲ್ಪಟ್ಟಿರುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇ 24 ರ ಸಾಯಂಕಾಲ 5 ಗಂಟೆಯಿಂದ ಮೇ 25 ರ ಮಧ್ಯರಾತ್ರಿ 12 ಗಂಟೆಯವರೆಗೆ ತುಮಕೂರು ನಗರಸಭೆ ವ್ಯಾಪ್ತಿಯಲ್ಲಿ ಕಸಾಯಿಖಾನೆ ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚುವುದು, ಈ ಅವಧಿಯಲ್ಲಿ ಮಾಂಸ ಮಾರಾಟ ಮಾಡುವುದಾಗಲಿ, ಸಂಗ್ರಹಣೆ ಮಾಡುವುದಾಗಲಿ ನಿಷೇಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಪದವಿ ತರಗತಿಗಳ ಪ್ರವೇಶಾತಿ ಆರಂಭ
ಹುಳಿಯಾರು: ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2013-14ನೇ ಸಾಲಿನ ಬಿಎ, ಬಿಎಸ್ಸಿ, ಬಿಬಿಎಂ, ಬಿಕಾಂ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಬಿಎ ವಿಭಾಗದಲ್ಲಿ ಹೆಚ್.ಇ.ಪಿ.ಎಚ್.ಇ.ಕೆ.ಎಚ್.ಇ.ಇ ಹಾಗೂ ಬಿಎಸ್ಸಿ ವಿಭಾಗದಲ್ಲಿ ಪಿಎಂಸಿ ವಿಷಯಗಳ ಆಯ್ಕೆಗಳಿದ್ದು ತುಮಕೂರು ವಿಶ್ವವಿದ್ಯಾಲಯದ ನಿಗದಿತ ಪಠ್ಯಾನುಸಾರ ವಿಷಯಗಳ ಆಯ್ಕೆಗಳನ್ನೊಳಗೊಂಡಿದ್ದು, ಕಂಪ್ಯೂಟರ್ ಕಲಿಕೆ, ಸ್ಪೋಕನ್ ಇಂಗ್ಲಿಷ್ ಕಲಿಕೆ ಸೌಲಭ್ಯವಿದ್ದು ವಿದ್ಯಾರ್ಥಿಗಳು ಕಾಲೇಜಿನ ಕಚೇರಿ ಸಮಯದಲ್ಲಿ ಅರ್ಜಿಗಳನ್ನು ಪಡೆಯುವಂತೆ ಪ್ರಾಂಶುಪಾಲ ಆರ್. ಮೂಗೇಶಪ್ಪ (08133-256205) ಕೋರಿದ್ದಾರೆ.