50 ಸಿಟಿ ಬಸ್ಗೆ ಕೇಂದ್ರ ಮೌಖಿಕ ಒಪ್ಪಿಗೆ
ತುಮಕೂರು: ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರ ತುಮಕೂರಿಗೆ ಭರ್ತಿ 50 ಸಿಟಿ ಬಸ್ ನೀಡಲು ಮೌಖಿಕ ಒಪ್ಪಿಗೆ ನೀಡಿದೆ.
ಈಗಾಗಲೇ ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರ ಕಚೇರಿಯಿಂದ ಪ್ರಸ್ತಾವನೆ ಹೋಗಿದ್ದು ತುಮಕೂರಿಗೆ 50 ಸಿಟಿ ಬಸ್ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಈಗಾಗಲೇ 51 ಸಿಟಿ ಬಸ್ ಸಂಚರಿಸುತ್ತಿದ್ದು ಕೇಂದ್ರ ಸರ್ಕಾರ 50 ಬಸ್ ನೀಡಲಿದೆ. ಹಾಗೆಯೇ ಕೆಎಸ್ಆರ್ಟಿಸಿ ಇನ್ನು 10 ದಿವಸದೊಳಗೆ 10 ಬಸ್ ನೀಡಲಿದೆ. ಹೀಗಾಗಿ ಅತಿ ಶೀಘ್ರದಲ್ಲಿ ತುಮಕೂರಿನಲ್ಲಿ ಸಿಟಿ ಬಸ್ ಸಂಖ್ಯೆ 100 ರ ಗಡಿ ದಾಟಲಿದೆ.
ಹಿರೇಹಳ್ಳಿಗೂ ಸಿಟಿ ಬಸ್: ಇನ್ನು 10 ದಿವಸದೊಳಗೆ 10 ಬಸ್ ಬರಲಿದ್ದು ಆ ಬಸ್ಗಳನ್ನು ಈಗ ಸಂಚರಿಸುತ್ತಿರುವ ಮಾರ್ಗಕ್ಕೆ ಬಿಡಲು ಕೆಎಸ್ಆರ್ಟಿಸಿ ತುಮಕೂರು ಘಟಕ ನಿರ್ಧರಿಸಿದೆ. ಕ್ಯಾತ್ಸಂದ್ರವರೆಗೆ ಇರುವ ಬಸ್ ಅನ್ನು ಹಿರೇಹಳ್ಳಿವರೆಗೆ ಬಿಡುವ ಯೋಜನೆ ಹೊಂದಲಾಗಿದೆ. ಕೆಲ ಬಸ್ಗಳನ್ನು ಮಲ್ಲಸಂದ್ರದವರೆಗೂ ಹೆಚ್ಚುವರಿಯಾಗಿ ಓಡಿಸಲು ತೀರ್ಮಾನಿಸಲಾಗಿದೆ.
ಸಿಟಿ ಬಸ್ ನಿಲ್ದಾಣ ನಿರ್ಮಾಣ: ಈಗಾಗಲೇ ತುಮಕೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿನ ಸೈಕಲ್ ಸ್ಟ್ಯಾಂಡ್ ಬಳಿ 30 ಲಕ್ಷ ರು. ವೆಚ್ಚದಲ್ಲಿ ಪುಟ್ಟ ಸಿಟಿ ಬಸ್ ನಿಲ್ದಾಣ ಕಾಮಗಾರಿ ಕೂಡ ಭರದಿಂದ ಸಾಗುತ್ತಿದೆ. ಒಟ್ಟಿಗೆ 8 ಬಸ್ಗಳನ್ನು ಏಕಕಾಲದಲ್ಲಿ ಇಲ್ಲಿ ನಿಲ್ಲಿಸಲಾಗುವುದು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ನಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು ್ಲ 30 ಲಕ್ಷ ರು. ವೆಚ್ಚದ್ಲಲಿ ಸಿಟಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ.
ಬೆಳ್ಳಾವಿ ರೂಟ್ ಲಾಸ್, ಶೆಟ್ಟಿಹಳ್ಳಿ ಲಾಭದತ್ತ: ಶೆಟ್ಟಿಹಳ್ಳಿ ಮತ್ತು ಗೂಳರಿವೆ ಮಾರ್ಗದಲ್ಲಿ ಹೆಚ್ಚು ಲಾಭವಾಗುತ್ತಿದೆ. ಆದರೆ ಬೆಳ್ಳಾವಿ ಮಾರ್ಗದಲ್ಲಿ ಸಿಟಿ ಬಸ್ಗೆ ನಷ್ಟ ಉಂಟಾಗುತ್ತಿದೆ. ಹೀಗಾಗಿ ಸಿಟಿ ಬಸ್ ಏಪ್ರಿಲ್ ಅಂತ್ಯಕ್ಕೆ ಲಾಭವೂ ಇಲ್ಲದೇ, ನಷ್ಟವೂ ಇಲ್ಲದೆ ನಡೆಯುತ್ತಿದೆ.
ಸಿಟಿ ಬಸ್ ನಿಲ್ದಾಣ- ಜಾಗಕ್ಕೆ ಮನವಿ: ನರ್ಮ್ ಯೋಜನೆಯಡಿ 50 ಬಸ್ ತುಮಕೂರಿಗೆ ಬಂದರೆ ಭರ್ತಿ 110 ಸಿಟಿ ಬಸ್ಗಳು ತುಮಕೂರು ನಗರದಲ್ಲಿ ಸಂಚರಿಸಲಿದೆ. ಹೀಗಾಗಿ ಸಿಟಿ ಬಸ್ಗೆ ಪ್ರತ್ಯೇಕ ನಿಲ್ದಾಣಕ್ಕಾಗಿ ಜಾಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ವಿಶ್ವನಾಥ್ ಮನವಿ ಸಲ್ಲಿಸಿದ್ದಾರೆ.
ಗುಬ್ಬಿ ವೀರಣ್ಣ ರಂಗಮಂದಿರ ಪಕ್ಕದ ಜಾಗವನ್ನು ಸಿಟಿ ಬಸ್ ನಿಲ್ದಾಣಕ್ಕೆ ಬಿಟ್ಟುಕೊಡುವಂತೆ ವಿಶ್ವನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.
ಮಧುಗಿರಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಡಿಪೋ: ಮಧುಗಿರಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಡಿಪೋ ಆರಂಭವಾಗಿದೆ. ಹೀಗಾಗಿ ಹಾಲಿ ತುಮಕೂರು ಬಸ್ ನಿಲ್ದಾಣದ ಬಳಿ ಇರುವ ಕೆಎಸ್ಆರ್ಟಿಸಿ ಡಿಪೋವನ್ನು ತಾತ್ಕಾಲಿಕವಾಗಿ ಸಿಟಿ ಬಸ್ ನಿಲುಗಡೆಗೆ ಬಳಸಿಕೊಳ್ಳುವ ಇರಾದೆಯನ್ನು ತುಮಕೂರು ಕೆಎಸ್ಆರ್ಟಿಸಿ ಘಟಕ ಹೊಂದಿದೆ.
ಈಗಾಗಲೇ ಸಿಟಿ ಬಸ್ ತುಮಕೂರಿನಲ್ಲಿ ಜನಪ್ರಿಯ ಸಾರಿಗೆಯಾಗಿದ್ದು ಇದನ್ನು ಇನ್ನಷ್ಟು ಜನಪ್ರಿಯಗೊಳಿಸಲು ಶೀಘ್ರ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ಇರಾದೆಯನ್ನು ತುಮಕೂರು ಕೆಎಸ್ಆರ್ಟಿಸಿ ಘಟಕ ಹೊಂದಿದೆ.
ಮುಖ್ಯಾಂಶಗಳು....
- ಶೆಟ್ಟಿಹಳ್ಳಿ, ಗೂಳರಿವೆ ಮಾರ್ಗ ಲಾಭದಲ್ಲಿ
- ನಷ್ಟದಲ್ಲಿ ನರಳುತ್ತಿದೆ ಬೆಳ್ಳಾವಿ ಮಾರ್ಗ
- ಹಿರೇಹಳ್ಳಿ, ಮಲ್ಲಸಂದ್ರಕ್ಕೂ ಬಸ್ ಸೌಲಭ್ಯ
- ಶೀಘ್ರ 100 ರ ಗಡಿ ದಾಟಲಿದೆ ಬಸ್ ಸಂಖ್ಯೆ
- ಹೊಸ ಶೆಲ್ಟರ್ ನಿರ್ಮಾಣಕ್ಕೆ ಟೂಡಾಗೆ ಮನವಿ
-ಉಗಮ ಶ್ರೀನಿವಾಸ್