'ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿ'
ಮಧುಗಿರಿ: ಜೂನಲ್ಲಿ ನಡೆಸಲು ಉದ್ದೇಶಿಸಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಶಾಸಕ ಹಾಗೂ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ಕಸಾಪ ಕಚೇರಿಯಲ್ಲಿ ಪದಾಧಿಕಾರಿಗಳು ಸೇರಿ ಶಾಸಕರನ್ನು ಸಾಹಿತ್ಯ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಮಾತನಾಡಿದ ರಾಜಣ್ಣ, ಸಮ್ಮೇಳನಕ್ಕೆ ಬರುವ ಸಾಹಿತ್ಯಸಕ್ತರಿಗೆ, ಪ್ರತಿನಿಧಿಗಳಿಗೆ ಹಾಗೂ ಅಭಿಮಾನಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಬೇಕು. ಸಮ್ಮೇಳನ ಅದ್ಧೂರಿಯಾಗಿ ನಡೆಯುವಂತೆ ಮುತುವರ್ಜಿ ವಹಿಸಬೇಕು.
ಈ ಸಮ್ಮೇಳನಕ್ಕೆ ಸಾರ್ವಜನಿಕರು, ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಭಿಮಾನಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ತಹಸೀಲ್ದಾರ್ ಕೆ.ರಮೇಶ್, ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ, ಸ್ವಾಗತ ಸಮಿತಿ ಸದಸ್ಯರಾದ ಎಂ.ಕೆ.ನಂಜುಂಡಯ್ಯ, ಪ್ರೊ.ಮ.ಲ.ನ.ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಮರಾವತಿ ದ್ರೇಹಚಾರ್, ಎಂ.ಜಿ.ರಘು, ಪಿ.ಸಿ.ಕೃಷ್ಣಾರೆಡ್ಡಿ, ರಾಮಕೃಷ್ಣಪ್ಪ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.