ಕಸದರಾಶಿ ವಿಲೇವಾರಿಗೆ ಒತ್ತಾಯ
ತಿಪಟೂರು: ನಗರದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕದಲ್ಲಿರುವ ರಸ್ತೆಯಲ್ಲಿ ಕಸದ ರಾಶಿಯು ಕೊಳೆತು ನಾರುತ್ತಿದ್ದು, ಇದರಿಂದಾಗಿ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೇವಾಲಯ ಉಸ್ತುವಾರಿ ಕಮಿಟಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠವು ಇತಿಹಾಸ ಪ್ರಸಿದ್ಧವಾಗಿದ್ದು, ದಿನಕ್ಕೆ ನೂರಾರು ಭಕ್ತರು ಬಂದು ಹೋಗುವ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯದ ಮುಂದೆ ಇರುವಂತಹ ಕಸದರಾಶಿಯು ದುರ್ಗಂದ ಬೀರುತ್ತಿದ್ದು, ಮನಃಶಾಂತಿಗಾಗಿ ದೇವಾಲಯಕ್ಕೆ ಬರುವಂತಹ ಭಕ್ತಾದಿಗಳಿಗೆ ಕಿರಿ ಕಿರಿಯಾಗುತ್ತಿದೆ. ಈ ಬಗ್ಗ ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ನಗರಸಭೆ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕೂಡಲೆ ನಗರಸಭೆ ಅಧಿಕಾರಿಗಳು ನಿದ್ದೆಯಿಂದ ಮೇಲೆದ್ದು, ದುರ್ನಾತ ಬೀರುವ ಕಸದ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂದು ಭಕ್ತರು ಹಾಗೂ ದೇವಾಲಯದ ಉಸ್ತುವಾರಿ ಕಮಿಟಿ ಒತ್ತಾಯಿಸಿದೆ.
ಯಾದವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ತಿಪಟೂರು: ತುಮಕೂರು ಜಿಲ್ಲೆಯ ಹತ್ತು ತಾಲೂಕಿನ ಯುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಲುವಾಗಿ 2012-13ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.85ರಷ್ಟು ಮೇಲ್ಪಟ್ಟ (ಯಾದವ) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಜಿಲ್ಲಾ ಯುವ ಯಾದವ ಸಂಘದ ಗೌರವಾಧ್ಯಕ್ಷ ಪ್ರಕಾಶ್, ಅಧ್ಯಕ್ಷ ತೀರ್ಥಕುಮಾರ್ ತಿಳಿಸಿದ್ದಾರೆ. ಆದ್ದರಿಂದ ಮೇ 29ರೊಳಗೆ ನಿಮ್ಮ ಅಂಕಪಟ್ಟಿಯ ಜೆರಾಕ್ಸ್ ಅಥವಾ ರೀಸಲ್ಟ್ ಶೀಟನ್ನು theerthakumaryadavzgmail.com ಇಮೇಲ್ ಐಡಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9482283319 ಸಂಪರ್ಕಿಸಬಹುದು.