ಕಾನೂನು ರೀತ್ಯ ಹಕ್ಕು ಪಡೆದು ಕಟ್ಟಡ ನಿರ್ಮಾಣ
ಗುಬ್ಬಿ: ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಳೆದ 30 ವರ್ಷದಿಂದಲೂ ಸರ್ವೆ ನಂ.2 ರಲ್ಲಿನ 2.4 ಎಕರೆ ಜಮೀನು ನಮ್ಮ ಸ್ವಾಧೀನದಲ್ಲಿದ್ದು, ಈ ಸ್ವತ್ತನ್ನು ಖಾಸಗಿ ವ್ಯಕ್ತಿಗಳಿಂದ ಕಾನೂನು ಬದ್ಧವಾಗಿ ಖರೀದಿಸಲಾಗಿದೆ. ಇದು ಯಾವುದೇ ಸಂಘ ಸಂಸ್ಥೆ ಹಾಗೂ ಸಾರ್ವಜನಿಕ ಆಸ್ತಿಯಲ್ಲ. ಕಾನೂನು ರೀತ್ಯಾ ಎಲ್ಲಾ ಹಕ್ಕು ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಡಿ.ಆರ್.ಜಯರಾಜ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ನಿಮಯಮಾನುಸಾರ ತೆರಿಗೆಗಳನ್ನು ಈ ವರೆವಿಗೂ ಪಾವತಿ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ದಾಖಲೆಯಲ್ಲಿಯೂ ಜಾಮೀಯ ಮಸೀದಿಯ ಹೆಸರಿನಲ್ಲಿ ಇಲ್ಲ. ಕಾನೂನು ಬದ್ಧ ನಮ್ಮ ಜಮೀನನ್ನು ವಿವಾದಾತ್ಮಕ ಸ್ಥಳ ಎಂದು ಸೃಷ್ಟಿಸಿದರುವುದು ಸತ್ಯಕ್ಕೆ ದೂರವಾದುದು ಎಂದು ತಿಳಿಸಿದರು.
ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನಮ್ಮ ಅನುಭವದಲ್ಲಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಗೆ ನಿಗದಿಪಡಿಸಿದ ಕಂದಾಯ ಪಾವತಿಸಿ ಪರವಾನಗಿ ಪಡೆದು ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದ ನಂತರ ಜಾಮೀಯ ಮಸೀದಿಗೆ ಸಂಬಂಧಿಸಿದ ಕೆಲವರು ಅನಗತ್ಯವಾಗಿ ಸ್ಥಳದ ಬಗ್ಗೆ ವಿವಾದ ಸೃಷ್ಟಿಸಿ ಅತಿಕ್ರಮವಾಗಿ ನಮ್ಮ ಸ್ಥಳಕ್ಕೆ ಧಾವಿಸಿ ತಂತಿಬೇಲಿಯನ್ನು ಕಿತ್ತೊಗೆದು ದೌರ್ಜನ್ಯವೆಸಗಿದ್ದಾರೆ. ಈ ಬಗ್ಗೆ ಪೊ ಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸ್ವತ್ತಿಗೆ ಸಂಬಂಧಿಸಿದಂತೆ ಕಳೆದ ಹಲವು ವರ್ಷದಿಂದ ಕಾನೂನು ಸಮರ ನಡೆದಿದೆ. ಕೆಳ ಹಂತದ ನ್ಯಾಯಾಲಯದಿಂದ ಉಚ್ಚನ್ಯಾಯಾಲಯದವರೆಗಿನ ಎಲ್ಲಾ ನ್ಯಾಯಾಲಯಗಳು ವಾದ ವಿವಾದ ಪರಿಶೀಲಿಸಿ ನಮ್ಮ ಪರವಾಗಿ ತೀರ್ಪು ನೀಡಿವೆ. ಈ ನಿಟ್ಟಿನಲ್ಲಿ ನ್ಯಾಯ ಬದ್ಧವಾಗಿರುವ ನಮ್ಮ ನಿವೇಶನದಲ್ಲಿ ನಿಯಮಾನುಸಾರ ಕಟ್ಟಡ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಮಾನಸಿಕ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದರು.