ಬ್ರಾಹ್ಮಣ ಸಭಾದಿಂದ ಪ್ರತಿಭಾ ಪುರಸ್ಕಾರ
ತುಮಕೂರು: ಇಲ್ಲಿನ ವಾಗ್ದೇವಿ ಬ್ರಾಹ್ಮಣ ಸಭಾದ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ. 80 ಅಂಕ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜೂನ್ 16 ರ ಸಂಜೆ 3 ಗಂಟೆಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿದೆ. ಅರ್ಹ ವಿದ್ಯಾರ್ಥಿಗಳು ತುಮಕೂರು ನಗರದ ವಿಜಯನಗರ, ರಾಘವೇಂದ್ರ ನಗರ, ಮಾರುತಿ ನಗರ, ನೃಪತುಂಗಾ ಬಡಾವಣೆ, ಜಯನಗರ ಪೂರ್ವ ಮತ್ತು ಪಶ್ಚಿಮ ಬಡಾವಣೆ, ಸಿದ್ಧರಾಮೇಶ್ವರ ಬಡಾವಣೆ, ಶೆಟ್ಟಿಹಳ್ಳಿ, ಸಪ್ತಗಿರಿ ಬಡಾವಣೆ, ದೇವನೂರು, ಚನ್ನಪ್ಪನಪಾಳ್ಯ, ಶಿವಮೂಕಾಂಬಿಕ ನಗರ, ಚನ್ನಬಸವೇಶ್ವರ ಬಡಾವಣೆ ಹಾಗೂ ಉಪ್ಪಾರಹಳ್ಳಿಗಳಲ್ಲಿ ವಾಸವಿರಬೇಕು. ಅಂಕಪಟ್ಟಿಯ ನಕಲು ಪ್ರತಿಗಳನ್ನು ಸ್ವವಿಳಾಸದೊಂದಿಗೆ ಶ್ರೀ ವಾಗ್ದೇವಿ ಬ್ರಾಹ್ಮಣ ಸಭಾದ ಸಹ ಕಾರ್ಯದರ್ಶಿ ಸಿ.ಎನ್. ಸತ್ಯನಾರಾಯಣ, ಬಾಲಾಜಿ ಕಾಫಿ ವರ್ಕ್ಸ್, ದೇವನೂರು ಮುಖ್ಯ ರಸ್ತೆ, ಶೆಟ್ಟಿಹಳ್ಳಿ ಗೇಟ್, ತುಮಕೂರು ಇಲ್ಲಿಗೆ ತಲುಪಿಸಲು ಕೋರಲಾಗಿದೆ.
ಜೂ. 4ರಿಂದ ಜಾತ್ರಾ ಮಹೋತ್ಸವ
ಇಲ್ಲಿನ ಶ್ರೀ ಲಕ್ಷ್ಮೀದೇವಿ ಟ್ರಸ್ಟ್ ವತಿಯಿಂದ ಜಯಪುರ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮೀದೇವಿಯರ 60ನೇ ವರ್ಷದ ವೈಭವದ ಜಾತ್ರಾ ಮಹೋತ್ಸವ ಜೂನ್ 4 ರಿಂದ ಮೂರು ದಿವಸಗಳ ಕಾಲ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ಸವ, ಭಜನೆ, ನಂದಿಕೋಲು, ವೀರಗಾಸೆ, ಬಸವನ ಕುಣಿತ, ಆನೆಕಲ್ಲಿನ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಸಲಾಗುವುದು ಎಂದು ಟ್ರಸ್ಟ್ನ ಅಧ್ಯಕ್ಷ ಮತ್ತು ನಗರಸಭಾ ಸದಸ್ಯ ಸುಧೀಶ್ವರ್, ಟಿ.ಆರ್. ನಾಗೇಶ್ ತಿಳಿಸಿದ್ದಾರೆ.
ಡೊನೇಷನ್ ಹಾವಳಿ ತಪ್ಪಿಸಿ
ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚುತ್ತಿದ್ದು ಇದನ್ನು ಕೂಡಲೇ ತಪ್ಪಿಸಬೇಕೆಂದು ಕೆಂಪೇಗೌಡ ಯುವ ಸೇನೆ ಅಧ್ಯಕ್ಷ ಅಕ್ಷಯ ಚೌಧರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಹರೀಶ್, ಜಿಲ್ಲಾ ಸಂಚಾಲಕ ಟಿ.ಕೆ. ಪ್ರಸನ್ನಕುಮಾರ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಮಾಜ ಪುಸ್ತಕ ಬಿಡುಗಡೆ
ತುಮಕೂರು: ತುಮಕೂರಿನ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ತಾ.ಲ. ರಂಗನಾಥಶೆಟ್ಟಿ ಅವರ ಬದುಕು-ಬರಹ-ಸಾಧನೆ ಕುರಿತ ವಿಚಾರ ಸಂಕಿರಣ ಮತ್ತು ನೂತನ ಸಮಾಜ ಪುಸ್ತಕ ಬಿಡುಗಡೆ ಸಮಾರಂಭವನ್ನು ಮೇ. 26 ರಂದು ಬೆಳಗ್ಗೆ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ. ತಾ.ರಂ. ಪ್ರಮೀಳ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ವಿದ್ಯಾವಾಚಸ್ಪತಿ ಕವಿತಾಕೃಷ್ಣ ವಹಿಸಲಿದ್ದಾರೆ. ವಿಚಾರ ಸಂಕಿರಣದಲ್ಲಿ ವಿ.ಪಿ. ಕೃಷ್ಣಮೂರ್ತಿ, ಶೈಲ ರಂಗನಾಥ್, ಎಂ.ವಿ. ನಾಗರಾಜರಾವ್ ಉಪನ್ಯಾಸ ನೀಡಲಿದ್ದಾರೆ.